Site icon Vistara News

Kuwait Fire: ಕುವೈತ್‌ನಲ್ಲಿ ಭೀಕರ ಅಗ್ನಿ ದುರಂತಕ್ಕೆ 41 ಭಾರತೀಯರ ಬಲಿ; ದಕ್ಷಿಣ ಭಾರತದವರೇ ಹೆಚ್ಚು!

Kuwait Fire

40 Indians Killed After Massive Fire Rips Through Kuwait Building

ಕುವೈತ್‌ ಸಿಟಿ: ಕುವೈತ್‌ನ ಮಂಗಾಫ್ ನಗರದಲ್ಲಿರುವ ಆರು ಮಹಡಿಯ ಬೃಹತ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ (Kuwait Fire) ಮೃತಪಟ್ಟ ಎಲ್ಲ 41 ಮಂದಿಯೂ ಭಾರತೀಯರೇ ಎಂಬ ಮಾಹಿತಿ ಲಭ್ಯವಾಗಿದೆ. ಆರು ಮಹಡಿಯ ಕಟ್ಟಡದ ಅಡುಗೆ ಮನೆಯಲ್ಲಿ ಬೆಂಕಿ (Fire Accident In Kuwait) ಹೊತ್ತಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಆವರಿಸಿದೆ. ಇದರಿಂದಾಗಿ 41 ಭಾರತೀಯರು (Indians) ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ದುರ್ಘಟನೆ ಸಂಭವಿಸುತ್ತಲೇ ಕುವೈತ್‌ ಪ್ರಧಾನಿ ಶೇಖ್‌ ಫಹಾದ್‌ ಯುಸುಫ್‌ ಸೌದ್‌ ಅಲ್‌-ಸಬಾಹ್‌ ಭೇಟಿ ನೀಡಿದ್ದು, ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ದುರಂತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಕುವೈತ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ. ಸುಮಾರು 11 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ಅಗತ್ಯ ನೆರವು ನೀಡಲು ಕೂಡ ಕ್ರಮ ತೆಗೆದುಕೊಂಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಕೂಡ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಪ್ರಾರಂಭಗೊಂಡಿತ್ತು. ಬೆಂಕಿಯನ್ನು ನೋಡಿದ ನಂತರ ಕೆಲವರು ಅಪಾರ್ಟ್​ಮೆಂಟ್​ನಿಂದ ಜಿಗಿದು ಮೃತಪಟ್ಟಿದ್ದರೆ ಇತರರು ಸುಟ್ಟಗಾಯಗಳು ಮತ್ತು ಹೊಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮತಪಟ್ಟವರಲ್ಲಿ ಹೆಚ್ಚಿನವರು ಕೇರಳ ಹಾಗೂ ತಮಿಳುನಾಡಿನವರಾದರೆ, ಉಳಿದವರು ಉತ್ತರ ಭಾರತದವರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸಂತಾಪ ಸೂಚಿಸಿದ ಜೈಶಂಕರ್‌

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಭಾರತೀಯರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಸಂತಾಪ ಸೂಚಿಸಿದ್ದಾರೆ. “ಅಗ್ನಿದುರಂತದ ಸುದ್ದಿ ತಿಳಿದು ಶಾಕ್‌ ಆಯಿತು. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಶಿಬಿರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಜೈಶಂಕರ್‌ ಪೋಸ್ಟ್‌ ಮಾಡಿದ್ದಾರೆ.

ಭಾರತೀಯ ಉದ್ಯಮಿಯ ಒಡೆತನದ ಕಟ್ಟಡ: ವರದಿ

ಒನ್​ಮನೋರಮಾ ವರದಿಯ ಪ್ರಕಾರ, ಹತ್ತಿರದ ವಾಣಿಜ್ಯ ಪ್ರದೇಶದ ಸುಮಾರು 195 ಕಾರ್ಮಿಕರು ಮತ್ತು ಹಲವಾರು ಮಲಯಾಳಿಗಳನ್ನು ವಾಸಿಸುತ್ತಿದ್ದ ಈ ಈ ಕಟ್ಟಡವು ಎನ್​ಬಿಟಿಸಿ ಗ್ರೂಪ್ ಗೆ ಸೇರಿದ್ದು. ಕೇರಳದ ಉದ್ಯಮಿ ಕೆಜಿ ಅಬ್ರಹಾಂ ಅವರ ಒಡೆತನದಲ್ಲಿರುವ ಈ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದರೂ, ಇನ್ನೂ ಹಲವಾರು ಮಂದಿ ಒಳಗೆ ಸಿಲುಕಿರುವ ವರದಿಗಳಿವೆ.

ಇದನ್ನೂ ಓದಿ: Firecracker Explosion: ಪುರಿ ಜಗನ್ನಾಥ ದೇಗುಲದಲ್ಲಿ ಅಗ್ನಿ ದುರಂತ; 15 ಮಂದಿಗೆ ಗಾಯ

Exit mobile version