ಇಸ್ತಾಂಬುಲ್: ಟರ್ಕಿಯ ಇಸ್ತಾಂಬುಲ್ ನಗರದ ಹೃದಯ ಭಾಗದಲ್ಲಿ ಸ್ಫೋಟ (Blast In Istanbul) ಸಂಭವಿಸಿದ್ದು, ಆರು ಜನ ಮೃತಪಟ್ಟಿದ್ದಾರೆ. ದುರಂತದಲ್ಲಿ 53 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಂದ್ರೀಯ ಇಸ್ತಾಂಬುಲ್‌ನ ಇಸ್ತಿಕ್‌ಲಾಲ್ ಪಾದಚಾರಿ ಮಾರ್ಗದಲ್ಲಿ ಸ್ಫೋಟ ಸಂಭವಿಸಿದೆ. ಇದು ಯಾವಾಗಲೂ ಜನಸಂದಣಿಯಿಂದ ಕೂಡಿರುವುದರಿಂದ ಸ್ಫೋಟದ ಪರಿಣಾಮವು ಗಂಭೀರವಾಗಿದೆ.
ಸ್ಫೋಟ ಸಂಭವಿಸಿದ ಜಾಗಕ್ಕೆ ಭದ್ರತಾ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ. ಘಟನೆ ಕುರಿತು ಸುದ್ದಿಗೋಷ್ಠಿ ನಡೆಸಿದ ಟರ್ಕಿ ಅಧ್ಯಕ್ಷ ಎರ್ಡೋಗನ್, “ಪ್ರಾಥಮಿಕ ತನಿಖೆ ಪ್ರಕಾರ ಇದೊಂದು ಉಗ್ರ ಕೃತ್ಯವಾಗಿದೆ. ಟರ್ಕಿಯಲ್ಲಿ ಉಗ್ರ ಕೃತ್ಯಗಳನ್ನು ಸಹಿಸಿಕೊಳ್ಳುವ ಮಾತೇ ಇಲ್ಲ. ಸ್ಫೋಟದ ಹಿಂದೆ ಮಹಿಳೆಯೊಬ್ಬರ ಕೈವಾಡವಿದೆ ಎಂಬ ಶಂಕೆ ಇದೆ. ಇದರ ಕುರಿತು ತನಿಖೆ ನಡೆಸಲಾಗುವುದು” ಎಂದು ಹೇಳಿದ್ದಾರೆ.
ಸಂತಾಪ ಸೂಚಿಸಿದ ಭಾರತ
ಟರ್ಕಿಯಲ್ಲಿ ಸಂಭವಿಸಿದ ದುರಂತದ ಕುರಿತು ಭಾರತ ವಿಷಾದ ವ್ಯಕ್ತಪಡಿಸಿದೆ. “ಟರ್ಕಿಯಲ್ಲಿ ಸ್ಫೋಟ ಸಂಭವಿಸಿ ಜನ ಪ್ರಾಣ ಕಳೆದುಕೊಂಡಿರುವುದಕ್ಕೆ ಭಾರತ ವಿಷಾದ ವ್ಯಕ್ತಪಡಿಸುತ್ತದೆ. ಗಾಯಗೊಂಡವರು ಕೂಡಲೇ ಗುಣಮುಖರಾಗಲಿ ಎಂಬುದಾಗಿ ಹಾರೈಸುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಇದನ್ನೂ ಓದಿ | Coimbatore Car Blast | ಕೊಯಮತ್ತೂರು ಸ್ಫೋಟಕ್ಕೆ ಉಗ್ರ ಲಿಂಕ್; 45 ಪ್ರದೇಶಗಳಲ್ಲಿ ಎನ್ಐಎ ರೇಡ್