Site icon Vistara News

Israel Palestine War: ಇಸ್ರೇಲ್‌ ದಾಳಿಗೆ ಗಾಜಾ ನಗರ ದಿವಾಳಿ; ಒಂದೇ ರಾತ್ರಿ 700 ಜನ ಸಾವು

Israel Attack On Gaza

700 Palestinians Killed In Overnight Israeli Strikes, Says Gaza

ಜೆರುಸಲೇಂ: ಅಕ್ಟೋಬರ್‌ 7ರಂದು ಸಾವಿರಾರು ರಾಕೆಟ್‌ಗಳ ಮೂಲಕ ದಾಳಿ ನಡೆಸಿದ ಹಮಾಸ್‌ ಉಗ್ರರನ್ನು ನಿರ್ನಾಮ (Israel Palestine War:) ಮಾಡಲು ಪಣತೊಟ್ಟಿರುವ ಇಸ್ರೇಲ್‌, ಮಂಗಳವಾರ ತಡರಾತ್ರಿ (ಅಕ್ಟೋಬರ್‌ 24) ಗಾಜಾ ನಗರದ ಮೇಲೆ ರಾಕೆಟ್‌ ದಾಳಿ ನಡೆಸಿದೆ. ಇಸ್ರೇಲ್‌ ನಡೆಸಿದ ದಾಳಿಗೆ 700ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ಹಮಾಸ್‌ ಉಗ್ರರೇ (Hamas Terrorists) ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದಂತಾಗಿದೆ ಎಂದು ತಿಳಿದುಬಂದಿದೆ.

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಮರ ಆರಂಭವಾದ ಬಳಿಕ ಇಸ್ರೇಲ್‌ ನಡೆಸಿದ ಭೀಕರ ದಾಳಿ ಇದಾಗಿದೆ ಎಂದು ತಿಳಿದುಬಂದಿದೆ. ಹಮಾಸ್‌ನ 400 ಪ್ರಮುಖ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್‌ ರಾತ್ರೋರಾತ್ರಿ ಗಾಜಾ ನಗರದ ಮೇಲೆ ದಾಳಿ ನಡೆಸಿದೆ. ಆದರೆ, ದಾಳಿಯಲ್ಲಿ 700ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಮಾಸ್‌ ಉಗ್ರ ಸಂಘಟನೆ ತಿಳಿಸಿದೆ. ಇಸ್ರೇಲ್‌ ಸೇನೆಯ ದಾಳಿಯಲ್ಲ ಸಾವಿರಾರು ಜನ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲು ಸಹ ಆಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

7 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 7,100 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್‌ ಮೇಲೆ ಹಮಾಸ್‌ ಮಾಡಿದ ದಾಳಿಯಿಂದ ಇದುವರೆಗೆ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್‌ ಸತತ ದಾಳಿಗೆ 5,700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ನಗರದಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ.

ಇದನ್ನೂ ಓದಿ: Israel Palestine War: ಸೈನೈಡ್‌ ಬಾಂಬ್‌ ಬಳಸಲು ಮುಂದಾಗಿದ್ದ ಹಮಾಸ್‌: ಇಸ್ರೇಲ್‌ ಅಧ್ಯಕ್ಷ

ಗಾಜಾ ಗಡಿಯಲ್ಲಿ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿ ಪೂರ್ಣ ಪ್ರಮಾಣದ ದಾಳಿ ನಡೆಸಲು ಇಸ್ರೇಲ್‌ ಸಜ್ಜಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇಸ್ರೇಲ್‌ ಸೈನಿಕರು ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಬಹುದು. ಇದರ ಭೀತಿಯಿಂದಾಗಿಯೇ ಹಮಾಸ್‌ ಉಗ್ರರು ಇಸ್ರೇಲ್‌ನ ಇಬ್ಬರು ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಇಷ್ಟಾದರೂ ಕೆಲವು ಉಗ್ರರು ರಕ್ಕಸ ಕೃತ್ಯಗಳ ಮೂಲಕ ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಇನ್ನು ಮತ್ತೊಂದೆಡೆ, ಬೆಂಜಮಿನ್‌ ನೆತನ್ಯಾಹು ಅವರು ಐಡಿಎಫ್‌ ಮುಖ್ಯಸ್ಥರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ವೇಳೆ, “ಹಮಾಸ್‌ ಉಗ್ರರರನ್ನು ನಾವು ನಿರ್ನಾಮ ಮಾಡದೆ ಬಿಡುವುದಿಲ್ಲ” ಎಂದು ಐಡಿಎಫ್‌ ಮುಖ್ಯಸ್ಥ ಹೇಳಿದ್ದಾರೆ.

Exit mobile version