Site icon Vistara News

ಬಹುಮತ ಕಳೆದುಕೊಂಡ ಪಾಕ್‌ ಪ್ರಧಾನಿ ಇಮ್ರಾನ್: ಭಾಷಣದ ಬಳಿಕ ರಾಜೀನಾಮೆ..?

Imran Khan

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ದೇಶವನ್ನುದ್ದೇಶಿಸಿ ಮಾತನಾಡಿದ ಬಳಿಕ ಇಮ್ರಾನ್‌ ಖಾನ್‌ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರವಷ್ಟೇ ದೇಶವನ್ನುದ್ದೇಶಿಸಿ ಬೃಹತ್‌ ರ‍್ಯಾಲಿಯಲ್ಲಿ ಸುಮಾರು ಒಂದೂವರೆ ಗಂಟೆ ಭಾವನಾತ್ಮಕ ಭಾಷಣ ಮಾಡಿದ್ದರು. ದೇಶವನ್ನು ಮೂರು ಹೆಗ್ಗಣಗಳು ಮೂವತ್ತು ವರ್ಷದಿಂದ ಕೊಳ್ಳೆ ಹೊಡೆಯುತ್ತಿವೆ ಎಂದು ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿದ್ದರು. ಇದೀಗ ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್‌ ರಶೀದ್‌ ಹೇಳಿದ್ದಾರೆ.

ನಮ್ಮ ಸರ್ಕಾರವನ್ನು ಉರುಳಿಸಲು ವಿದೇಶಿಗರು ಪಿತೂರಿ ನಡೆಸಿದ್ದಾರೆ ಎಂದು ಈಗಾಗಲೇ ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಈ ಕುರಿತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಇಮ್ರಾನ್‌ ಖಾನ್‌ ಇಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಪ್ರಧಾನಿ ಸ್ಥಾನಕ್ಕೆ ಇಮ್ರಾನ್‌ ಖಾನ್ ರಾಜೀನಾಮೆ ನೀಡುವ‌ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. 

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ನ ಪ್ರಮುಖ ಮೈತ್ರಿ ಪಕ್ಷ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್, ಅಲ್ಲಿನ ಪ್ರಮುಖ ವಿರೋಧ ಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಇಮ್ರಾನ್‌ ಖಾನ್‌ಗೆ ಭಾರಿ ಮುಖಭಂಗಕ್ಕೆ ಕಾರಣವಾಗಿದೆ. ಈಗಾಗಲೆ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಪ್ರತಿಪಕ್ಷಗಳೂ ಒಗ್ಗಟ್ಟಾಗಿವೆ. ಇದರ ಜತೆಗೆ ಇಮ್ರಾನ್‌ ಮಿತ್ರ ಪಕ್ಷಗಳೇ ಬಹಿರಂಗವಾಗಿ ವಿರೋಧಿಗಳೊಟ್ಟಿಗೆ ಗುರುತಿಸಿಕೊಂಡಿರುವುದರಿಂದ ಇನ್ನೊಂದು ವಾರದೊಳಗೆ ಇಮ್ರಾನ್‌ ಸರ್ಕಾರ ಪತನವಾಗಬಹುದು ಎಂದು ಊಹಿಸಲಾಗಿತ್ತು.

ಇಮ್ರಾನ್ ಖಾನ್ ವಿರುದ್ಧ ಒಗ್ಗೂಡಿರುವ ಪ್ರತಿಪಕ್ಷಗಳು ಎಂಕ್ಯೂಎಂ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ರಾಬ್ತಾ ಕಮಿಟಿ ಎಂಕ್ಯೂಎಂ ಮತ್ತು ಪಿಪಿಪಿ ಪಕ್ಷಗಳು ಹೊಸ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿವೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮಾಧ್ಯಮಗೋಷ್ಠಿಯಲ್ಲಿ ಬಹಿರಂಗಪಡಿಸುತ್ತೇವೆ ಎಂದು ಪಿಪಿಪಿ ಪಕ್ಷದ ನಾಯಕ ಬಿಲಾವಲ್ ಬುಟ್ಟೋ ಜರ್ದಾರಿ ಟ್ವಿಟ್ಟರ್‌​ನಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ 177 ಸದಸ್ಯ ಬಲ ಇದೆ. ಇಮ್ರಾನ್ ಖಾನ್ ನೇತೃತ್ವದ ಆಡಳಿತ ಪಕ್ಷದ ಬಲ 164ಕ್ಕೆ ಕುಸಿದಿದೆ. ಪ್ರಧಾನಿ ವಿರುದ್ಧ ಮಂಡಿಸುವ ವಿಶ್ವಾಸಮತ ಯಾಚನೆಯ ಪ್ರಸ್ತಾವಕ್ಕೆ ಬಲ ಸಿಗಬೇಕಿದ್ದರೆ ಪ್ರತಿಪಕ್ಷಗಳಿಗೆ 172 ಸದಸ್ಯ ಬಲ ಸಾಕು. ಪಾಕಿಸ್ತಾನ ಸಂಸತ್ತಿನ ಒಟ್ಟು ಸದಸ್ಯ ಬಲ 342. ಸರ್ಕಾರ ರಚನೆಗೆ ಬೇಕಿರುವ ಮ್ಯಾಜಿಕ್ ನಂಬರ್ 172.

Exit mobile version