Site icon Vistara News

US Strikes: ಇರಾನ್‌ ನೆಲೆ ಮೇಲೆ ಅಮೆರಿಕ ದಾಳಿ, 9 ಜನ ಸಾವು; 3ನೇ ಮಹಾಯುದ್ಧಕ್ಕೆ ಮುನ್ನುಡಿ?

US Strikes

9 Killed In US Strikes On Iran-Linked Site In Syria

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವು ಮುಂದುವರಿದಿದೆ. ಹಮಾಸ್‌ ಉಗ್ರರ ಬಳಿಕ ಇಸ್ರೇಲ್‌ ನೀಡುತ್ತಿರುವ ತಿರುಗೇಟು (Israel Palestine War) ತೀವ್ರವಾಗುತ್ತಿದ್ದು, ಗಾಜಾ ನಗರದ ಮೇಲಿನ ದಾಳಿಯು ರಕ್ತಪಾತಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಸಿರಿಯಾದಲ್ಲಿರುವ ಇರಾನ್‌ ನೆಲೆಯ ಮೇಲೆ ಅಮೆರಿಕ ಯುದ್ಧವಿಮಾನದ ಮೂಲಕ ದಾಳಿ (US Strikes) ನಡೆಸಲಾಗಿದ್ದು, 9 ಜನ ಮೃತಪಟ್ಟಿದ್ದಾರೆ. ಹಾಗಾಗಿ, ಜಗತ್ತು ಮೂರನೇ ಮಹಾಯುದ್ಧದತ್ತ (Third World War) ಮುಖ ಮಾಡುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

“ಸ್ವಯಂ ರಕ್ಷಣೆಗಾಗಿ ಇರಾನ್‌ನಲ್ಲಿರುವ ಸಿರಿಯಾ ಸೇನಾ ನೆಲೆಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ. ಇರಾನ್‌ನ ಇಸ್ಲಾಮಿಕ್‌ ರೆವೊಲ್ಯೂಷನರಿ ಗಾರ್ಡ್ಸ್‌ ಕಾರ್ಪ್ಸ್‌ ನೆಲೆಯ ಮೇಲೆ ದಾಳಿ ನಡೆಸಲಾಗಿದೆ. ಅಮೆರಿಕದ ಎರಡು ಎಫ್‌-15 ಯುದ್ಧವಿಮಾನಗಳ ಮೂಲಕ ದಾಳಿ ನಡೆಸಲಾಗಿದೆ” ಎಂದು ಅಮೆರಿಕ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಮಾಹಿತಿ ನೀಡಿದ್ದಾರೆ. ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಮರಕ್ಕೆ ಇರಾನ್‌ ಕುಮ್ಮಕ್ಕೇ ಕಾರಣವಾಗಿದೆ. ಮಧ್ಯ ಪ್ರಾಚ್ಯದಲ್ಲಿ ಅಶಾಂತಿ ನೆಲೆಸಲು ಇರಾನ್‌ ಕಾರಣವಾಗಿದೆ ಎಂದು ಕೂಡ ಅಮೆರಿಕ ಆರೋಪಿಸಿದೆ.

ಕೆಲವು ದಿನಗಳ ಹಿಂದಷ್ಟೇ ಅಂದರೆ, ಅಕ್ಟೋಬರ್‌ 27ರಂದು ಕೂಡ ಸಿರಿಯಾದಲ್ಲಿರುವ ಇರಾನ್‌ ನೆಲೆಯ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಇರಾಕ್‌ ಹಾಗೂ ಸಿರಿಯಾದಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇತ್ತೀಚೆಗೆ ಇರಾನ್‌ ಡ್ರೋನ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಅಮೆರಿಕವು ಸಿರಿಯಾದಲ್ಲಿರುವ ಇರಾನ್‌ನ ಇಸ್ಲಾಮಿಕ್‌ ರೆವೊಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ನ ಎರಡು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಹೀಗೆ ದಾಳಿ-ಪ್ರತಿದಾಳಿ ನಡೆಯುತ್ತಿರುವ ಕಾರಣ ಅಮೆರಿಕ ಹಾಗೂ ಇರಾನ್‌ ಮಧ್ಯೆ ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: US Strikes: ಇರಾನ್‌ ಸೇನಾ ನೆಲೆಗಳ ಮೇಲೆ ಅಮೆರಿಕ ದಾಳಿ; ನಡೆಯುತ್ತಾ ಮತ್ತೊಂದು ಯುದ್ಧ?

ಗಾಜಾದಲ್ಲಿಯೇ 10 ಸಾವಿರ ಜನರ ಸಾವು

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 11 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 10 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ ಅಮೆರಿಕ ಹಾಗೂ ಇರಾನ್‌ ಸಂಘರ್ಷವು ಆತಂಕ ಮೂಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version