ಕೊಲಂಬೊ: ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಶ್ರೀಲಂಕಾ ಇದೀಗ ಕಗ್ಗತ್ತಲಲ್ಲಿ ಮುಳುಗಿದೆ. ಅಲ್ಲಿನ ಸರ್ಕಾರ ದೇಶದಾದ್ಯಂತ ದಿನಕ್ಕೆ 15 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಜಲಜನಕ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಇಂಧನದ ಅಲಭ್ಯತೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀಲಂಕಾದ ಲೋಕೋಪಯೋಗಿ ಆಯೋಗ ತಿಳಿದುಬಂದಿದೆ. ಕಳೆದೊಂದು ತಿಂಗಳಿನಿಂದ ಲಂಕಾದಲ್ಲಿ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಗುರುವಾರದಿಂದ ದಿನಕ್ಕೆ 15 ಗಂಟೆ ಲೋಡ್ ಶೆಡ್ಡಿಂಗ್ ಮಾಡುವುದಾಗಿ ಶ್ರೀಲಂಕಾ ಸರ್ಕಾರ ಹೇಳಿದೆ.
ಜಲವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳುತ್ತಿರುವುದು ಲೋಡ್ ಶೆಡ್ಡಿಂಗ್‌ಗೆ ಕಾರಣ. ಡೀಸೆಲ್ ಕೊರತೆಯೇ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಎಂದು ತಿಳಿದು ಬಂದಿದೆ.
ಲೋಡ್ ಶೆಡ್ಡಿಂಗ್‌ನಿಂದ ಜನಸಾಮಾನ್ಯರು ಕತ್ತಲಲ್ಲೇ ಕಾಲ ಕಳೆಯುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ, ಶ್ರೀಲಂಕಾದಲ್ಲಿರುವ ಕಾರ್ಖಾನೆಗಳು ಹಾಗೂ ಕಂಪನಿಗಳು ಕೂಡ ವಿದ್ಯುತ್ ವ್ಯತ್ಯಯದಿಂದಾಗಿ ಪರದಾಡುವಂತಾಗಿದೆ.
ವಿದೇಶಿ ವಿನಿಮಯ ಕೊರತೆಯ ಪರಿಣಾಮ ಶ್ರೀಲಂಕಾ ಸರ್ಕಾರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಇಂಧನದ ಕೊರತೆಯಿಂದ ಜನರು ಪೆಟ್ರೋಲ್ ಪಂಪ್ ಮತ್ತು ಸೀಮೆಎಣ್ಣೆ ಕೇಂದ್ರಗಳ ಮುಂದೆ ಗಂಟೆಗಟ್ಟಲೇ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್ ಪಂಪ್ ಮತ್ತು ಸೀಮೆಎಣ್ಣೆ ಕೇಂದ್ರಗಳಿಗೆ ಅಲ್ಲಿನ ಸರ್ಕಾರ ಸೇನಾ ಭದ್ರತೆ ಒದಗಿಸಿದೆ.
ಶ್ರೀಲಂಕಾದ ಆಸ್ಪತ್ರೆಗಳಿಗೂ ಲೋಡ್ ಶೆಡ್ಡಿಂಗ್ ಎಫೆಕ್ಟ್ ತಟ್ಟಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.