ಬೀಜಿಂಗ್: ಚೀನಾದಲ್ಲಿ ಮಿಲಿಟರಿ ದಂಗೆ ಉಂಟಾಗುವ ಸಾಧ್ಯತೆ ಇದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಗೃಹಬಂಧನ ವಿಧಿಸಲಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದು, (China coup) ಊಹಾಪೋಹಗಳು ಉಂಟಾಗಿವೆ.
ಚೀನಾದಲ್ಲಿ ಇಬ್ಬರು ಮಾಜಿ ಸಚಿವರುಗಳಿಗೆ ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಮರಣದಂಡನೆಯ ಶಿಕ್ಷೆ ವಿಧಿಸಿದ ಬಳಿಕ ನಾನಾ ವದಂತಿಗಳು ಹರಡಿವೆ. ಇದು ದೇಶದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ನಿರ್ಧಾರ ಎನ್ನಲಾಗಿದೆ. ಇತರ ನಾಲ್ವರು ಹಿರಿಯ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ಪ್ರಕಾರ ನಾನಾ ಕ್ಷೇತ್ರಗಳ ತಜ್ಞರು ಮತ್ತು ಮಿಲಿಟರಿ ಪಡೆಗಳ ನಾಯಕರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಿವಾಸಕ್ಕೆ ಧಾವಿಸುತ್ತಿದ್ದಾರೆ. ಅಧ್ಯಕ್ಷರ ನಿವಾಸದ ಸುತ್ತಮುತ್ತ ಸೇನಾ ವಾಹನಗಳ ಸಂಚಾರ ಹೆಚ್ಚುತ್ತಿದೆ. ಸೇನಾ ವಾಹನಗಳು ಸಂಚರಿಸುತ್ತಿರುವ ವಿಡಿಯೊಗಳು ಹರಿದಾಡುತ್ತಿವೆ. ಮಿಲಿಟರಿ ದಂಗೆಯ ಸುಳಿವಿನ ಹಿನ್ನೆಲೆಯಲ್ಲಿಯೇ 9,000 ದೇಶಿ ವಿಮಾನಗಳ ಹಾರಾಟವನ್ನು ದಿಢೀರ್ ರದ್ದುಪಡಿಸಲಾಗಿದೆ. ಕೆಲ ವರದಿಗಳ ಪ್ರಕಾರ ಸೇನೆಯ ಮುಖ್ಯಸ್ಥ ಲಿ ಕಿಯಾಮಿಂಗ್ ಮುಂದಿನ ಅಧ್ಯಕ್ಷರಾಗಲಿದ್ದಾರೆ.
ಸೇನಾ ವಾಹನಗಳು ಸೆಪ್ಟೆಂಬರ್ 22ರಿಂದ ಹೆಬೈ ಪ್ರಾಂತ್ಯದಿಂದ ಚೀನಾ ರಾಜಧಾನಿ ಬೀಜಿಂಗ್ ಕಡೆಗೆ ಅಭಿಮುಖವಾಗಿವೆ. ಚೀನಾ ಕಮ್ಯುನಿಸ್ಟ್ ಪಾರ್ಟಿ ( CCP) ನಾಯಕರು, ಪೀಪಲ್ಸ್ ಲಿಬರೇಷನ್ ಆರ್ಮಿ (PLA) ನಾಯಕನಾಗಿ ಕ್ಸಿ ಜಿನ್‌ಪಿಂಗ್ ಅವರನ್ನು ವಜಾಗೊಳಿಸಿದ್ದು, ಇದರ ಬೆನ್ನಲ್ಲೇ ಗೃಹಬಂಧನದಲ್ಲಿ ಇದ್ದಾರೆ ಎಂದು ವದಂತಿ ಹರಡಿದೆ.
ಇತ್ತೀಚಿನ ದಿನಗಳಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸುತ್ತಿಲ್ಲ. ಹೀಗಿದ್ದರೂ ಮಿಲಿಟರಿ ದಂಗೆ ನಡೆದಿರುವ ಸಾಕ್ಷ್ಯ ಸದ್ಯಕ್ಕೆ ಲಭಿಸಿಲ್ಲ ಎಂದೂ ಕೆಲ ತಜ್ಞರು ಹೇಳಿದ್ದಾರೆ.