Site icon Vistara News

Antonio Guterres | ಪ್ರತಿ 11 ನಿಮಿಷಕ್ಕೆ ಸಂಗಾತಿಯಿಂದಲೇ ಮಹಿಳೆ ಕೊಲೆ! ಹೀಗಾದ್ರೆ ಅವರು ಯಾರನ್ನ ನಂಬೋದು?

Antonio Guterres

ವಿಶ್ವಸಂಸ್ಥೆ: ಪ್ರತಿ 11 ನಿಮಿಷಕ್ಕೆ ಮಹಿಳೆ ಅಥವಾ ಹೆಣ್ಣು ಮಗು ತನ್ನ ಕುಟುಂಬದ ಸದಸ್ಯರು ಅಥವಾ ತಮ್ಮ ಹತ್ತಿರದ ಸಂಗಾತಿಯಿಂದ ಕೊಲೆಯಾಗುತ್ತಿದ್ದಾರೆಂದು ವಿಶ್ವಸಂಸ್ಥೆಯ (United Nations) ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟರೆಸ್ (Antonio Guterres) ಅವರು ಹೇಳಿದ್ದಾರೆ. ಮಹಿಳೆಯರ ವಿರುದ್ಧ ಹಿಂಸಾಚಾರ ಹೆಚ್ಚುತ್ತಿದ್ದು, ಸರ್ಕಾರಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಅವರು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಬೆಳಕಿಗೆ ಬಂದ ಶ್ರದ್ಧಾ ವಾಳ್ಕರ್ (Shraddha Murder Case) ಭೀಕರ ಕೊಲೆಯನ್ನು ರೆಫರೆನ್ಸ್ ಆಗಿಟ್ಟುಕೊಂಡು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟರೆಸ್ ಅವರು ಈ ಮಾಹಿತಿಯನ್ನು ಹೊರಗೆಡವಿದ್ದಾರೆ.

ನವೆಂಬರ್ 25ರಂದು ಮಹಿಳೆಯರ ವಿರುದ್ಧ ಹಿಂಸೆ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಮತ್ತು ಹೆಣ್ಣು ಮಗುವಿನ ವಿರುದ್ಧ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಪ್ರತಿ 11 ನಿಮಿಷಕ್ಕೆ ಮಹಿಳೆ ಅಥವಾ ಹೆಣ್ಣು ಮಗು ತನ್ನ ಕುಟುಂಬದ ಸದಸ್ಯರು ಅಥವಾ ಹತ್ತಿರದ ಸಂಗಾತಿಯಿಂದಲೇ ಕೊಲೆಯಾಗುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಬಳಿಕ ಉಂಟಾದ ಒತ್ತಡಗಳು, ಅನಿವಾರ್ಯತೆಗಳು ಮಹಿಳೆಯರ ವಿರುದ್ಧದ ಹಿಂಸೆಯನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ಅವರು ತಿಳಿಸಿದರು.

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರವು ಎಲ್ಲಾ ಹಂತಗಳಲ್ಲಿ ಭಾಗವಹಿಸುವಿಕೆಯನ್ನು ಮಿತಿಗೊಳಿಸುತ್ತದೆ. ಅವರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಿರಾಕರಿಸುತ್ತದೆ. ನಮ್ಮ ಜಗತ್ತಿಗೆ ಅಗತ್ಯವಿರುವ ಸಮಾನ ಆರ್ಥಿಕ ಚೇತರಿಕೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ. ಹಾಗಾಗಿ, ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಗಳ ಗಂಭೀರವಾಗಿ ಆಲೋಚಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ | UN Security Council | ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯತ್ವಕ್ಕೆ ಭಾರತವನ್ನು ಬೆಂಬಲಿಸಿದ ರಷ್ಯಾ

Exit mobile version