ಕಾಬೂಲ್: ಅಫಘಾನಿಸ್ತಾನದ (Afghanistan) ಹೆರಾತ್‌ನಲ್ಲಿ (Herat) ಶನಿವಾರ ಸಂಭವಿಸಿದ ಸರಣಿ ಭೂಕಂಪದಲ್ಲಿ (Afghan Earthquake) ಮೃತಪಟ್ಟವರ ಸಂಖ್ಯೆಯು 2000ಕ್ಕೆ ಏರಿಕೆಯಾಗಿದೆ. ಅಲ್ಲದೇ, ಇನ್ನೂ ಸಾಕಷ್ಟು ಜನರು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಹೆರಾತ್ ನಗರ ಮಾತ್ರವಲ್ಲದೇ, ಪಶ್ಚಿಮ ಅಫಘಾನಿಸ್ತಾನದ ಗ್ರಾಮೀಣ ಪ್ರದೇಶದಲ್ಲೂ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸಿದೆ. ತಾಲಿಬಾನ್ (Taliban Administration) ಆಡಳಿತದ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಮಾನವೀಯ ಬಿಕ್ಕಟ್ಟು ಎದುರಿಸುತ್ತಿರುವ ಅಫಘಾನಿಸ್ತಾನಕ್ಕೆ ಈ ಭೂಕಂಪವು ಭಾರೀ ಹೊಡೆತ ನೀಡಿದೆ.
ಅಫಘಾನಿಸ್ತಾನದ ಹೆರಾತ್ ನಗರದಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಿಕ್ಟರ್ ಮಾಪನದಂತೆ 4.3ರ ತೀವ್ರತೆಯ ಭೂಕಂಪ ಸಂಭವಿಸಿದೆ. ಹಾಗೆಯೇ, ಇದಾದ ಬಳಿಕ ಮಧ್ಯಾಹ್ನ 12.11ರ ಸುಮಾರಿಗೆ 6.1 ತೀವ್ರತೆಯ ಭೂಕಂಪ ಉಂಟಾಗಿದೆ. ಅಷ್ಟೇ ಅಲ್ಲ, ಮಧ್ಯಾಹ್ನ 12.42ರ ಸುಮಾರಗೆ 6.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಹೀಗೆ ಒಂದರ ಹಿಂದೆ ಒಂದರಂತೆ ಐದು ಬಾರಿ ಭೂಕಂಪ ಸಂಭವಿಸಿದ್ದು, ಜನ ಇನ್ನಿಲ್ಲದಂತೆ ಕಲ್ಲವಿಲಗೊಂಡರು ಎಂದು ತಿಳಿದುಬಂದಿದೆ.
ಹೆರಾತ್ ನಗರ, ಜೆಂಡೆಜಾನ್ ಹಾಗೂ ಘೋರಿಯಾನ್ ಜಿಲ್ಲೆಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಲೇ ಸಾವಿರಾರು ಜನ ಮನೆಯಿಂದ ಹೊರಗೆ ಬಂದರು. ರಸ್ತೆಗಳ ಮೇಲೆಯೇ ಇಡೀ ದಿನ ಕಳೆದ ಜನ ಅನ್ನ-ನೀರಿಲ್ಲದೆ ಪರದಾಡಿದರು ಎಂದು ತಿಳಿದುಬಂದಿದೆ. ಅದರಲ್ಲೂ, ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದವರ ರಕ್ಷಣೆಗೆ ಸಿಬ್ಬಂದಿ ಇಲ್ಲದೆ ಜನ ಪರದಾಡುವಂತಾಯಿತು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ : Afghan Earthquake: ಆಫ್ಘನ್‌ನಲ್ಲಿ ಒಂದೇ ದಿನ 5 ಬಾರಿ ಭಾರಿ ಭೂಕಂಪ
ಪ್ರಬಲ ಭೂಕಂಪದಿಂದಾಗಿ ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಸಾವಿರಕ್ಕೂ ಅಧಿಕ ಮಂದಿಗೆ ಆಯಾ ನಗರಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗತ್ತಿದೆ. ಹಾಗೆಯೇ, ಇನ್ನೂ ನೂರಾರು ಜನ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭೀಕರ ಭೂಕಂಪ ಸಂಭವಿಸಿದ ಕಾರಣ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಆಫ್ರಿಕಾ ದೇಶವಾದ ಮೊರಾಕೊದಲ್ಲಿ ಕೆಲ ವಾರಗಳ ಹಿಂದಷ್ಟೇ ಸಂಭವಿಸಿದ ಭೂಕಂಪದಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
ಹೆರಾತ್ ಪ್ರಾಂತ್ಯದಲ್ಲಿ 12 ಹಳ್ಳಿಗಳು ಸಂಪೂರ್ಣ ಅಥವಾ ಭಾಗಶಃ ನಾಶವಾಗಿವೆ. 600 ಮನೆಗಳು ನೆಲಸಮವಾಗಿವೆ. ಇದರಿಂದಾಗಿ ಸುಮಾರು 4200 ಜನರು ಭೂಕಂಪಪೀಡಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮೊದಲನೇ ಭೂಕಂಪ ಸಂಭವಿಸಿದಾಗಲೇ ಎಲ್ಲ ಮನೆಗಳು ಕುಸಿದು ಬಿದ್ದವು ಎಂದು 42 ವರ್ಷದ ಬಶೀರ್ ಅಹ್ಮದ್ ಅವರು ತಿಳಿಸಿದ್ದಾರೆ. ಮನೆಗಳ ಒಳಗೆ ಇದ್ದವರೆಲ್ಲರೂ ನೆಲಸಮಾಧಿಯಾಗಿದ್ದಾರೆ. ಕೆಲವು ಕುಟುಂಬಗಳು ಕಾಣೆಯಾಗಿವೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.