Site icon Vistara News

Afghan Women Protest | ಸ್ತ್ರೀ ಶಿಕ್ಷಣ ನಿಷೇಧ, ಬೀದಿಗಿಳಿದ ಹೆಣ್ಣುಮಕ್ಕಳು, ಮತ್ತೊಂದು ಇರಾನ್‌ ಆದೀತೇ ಆಫ್ಘನ್‌?

Afghan Women Protest

ಕಾಬೂಲ್‌: ಕಳೆದ ಆಗಸ್ಟ್‌ನಲ್ಲಿ ಇರಾನ್‌ನ ಮಹ್ಸಾ ಅಮಿನಿ ಎಂಬ ಯುವತಿಯು ಹಿಜಾಬ್‌ ಧರಿಸದ ಕಾರಣ ನೈತಿಕ ಪೊಲೀಸರು ಆಕೆಯನ್ನು ಹತ್ಯೆ ಮಾಡಿದ್ದಕ್ಕೆ ಇಡೀ ಇರಾನ್‌ ಹೊತ್ತಿ ಉರಿದಿತ್ತು. ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿ ಇರಾನ್‌ ವಿರುದ್ಧ ಜಾಗತಿಕ ಅಭಿಪ್ರಾಯ ಮೂಡಿಸಿದ್ದರು. ಈಗ ಇದೇ ಪರಿಸ್ಥಿತಿ ಅಫಘಾನಿಸ್ತಾನಕ್ಕೂ ಬಂದಿದೆ. ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾಲಿಬಾನಿಗಳು ಹೆಣ್ಣುಮಕ್ಕಳ ಶಿಕ್ಷಣ ನಿಷೇದಿಸಿದ್ದನ್ನು ವಿರೋಧಿಸಿ ಹೆಣ್ಣುಮಕ್ಕಳು ಪ್ರತಿಭಟನೆ (Afghan Women Protest) ನಡೆಸುತ್ತಿದ್ದಾರೆ.

ವಿದ್ಯಾರ್ಥಿನಿಯರು, ಮಹಿಳೆಯರು ಸೇರಿ ಅಫಘಾನಿಸ್ತಾನದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣ ನಿಷೇಧ ಹಿಂಪಡೆಯಬೇಕು ಎಂದು ತಾಲಿಬಾನ್‌ ಆಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ. ಹಾಗೆಯೇ, ಭಾರಿ ಪ್ರತಿಭಟನೆ ಮೂಲಕ ಜಗತ್ತಿನ ಗಮನವನ್ನೂ ಸೆಳೆಯಲು ಯತ್ನಿಸುತ್ತಿದ್ದಾರೆ. ನಗರ್‌ಹಾರ್‌, ಟಖಾರ್‌ ಹಾಗೂ ಹೆರಾತ್‌ನಲ್ಲಿ ಪ್ರತಿಭಟನೆಯು ಗಂಭೀರ ಸ್ವರೂಪ ಪಡೆಯುತ್ತಿದೆ ಎಂದು ತಿಳಿದುಬಂದಿದೆ.

ಕ್ವೆಟ್ಟಾದಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ
ಪಾಕಿಸ್ತಾನ ಹಾಗೂ ಅಫಘಾನಿಸ್ತಾನದ ಗಡಿಯಲ್ಲಿರುವ ಕ್ವೆಟ್ಟಾದಲ್ಲೂ ಆಫ್ಘನ್‌ ವಿದ್ಯಾರ್ಥಿಗಳು ತಾಲಿಬಾನ್‌ ಆಡಳಿತದ ತೀರ್ಮಾನವನ್ನು ಖಂಡಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಕ್ವೆಟ್ಟಾ ಪ್ರೆಸ್‌ ಕ್ಲಬ್‌ ಎದುರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳು ಕೂಡ ಆಫ್ಘನ್‌ ಮಹಿಳೆಯರ ಪರ ನಿಂತಿವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಆದರೆ, ಹೆಣ್ಣುಮಕ್ಕಳು ಎಂಬುದನ್ನೂ ನೋಡದೆ ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳು ಜಲಫಿರಂಗಿ ಪ್ರಯೋಗಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಅಫಘಾನಿಸ್ತಾನದಲ್ಲಿ ಕ್ರೌರ್ಯದಲ್ಲಿ ಬೇಯುತ್ತಿರುವ ನಾಗರಿಕ ಸಮಾಜ

Exit mobile version