ಇರಾನ್ ಅಧ್ಯಕ್ಷ (Iran President) ಇಬ್ರಾಹಿಂ ರೈಸಿ (Ebrahim Raisi) ಅವರು ಭಾನುವಾರ ರಾತ್ರಿ ದೇಶದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ಸಾವನ್ನಪ್ಪಿದ್ದಾರೆ. ರೈಸಿ ಅವರ ದಣಿವರಿಯದ ಸ್ಫೂರ್ತಿಯ ಸೇವೆಯ ಮಾರ್ಗದಲ್ಲಿ ಮುಂದುವರಿಯುವುದಾಗಿ ಇರಾನ್ ಆಡಳಿತ ರಾಷ್ಟ್ರದ ಜನರಿಗೆ ಭರವಸೆ ನೀಡಿದೆ. ವಿಮಾನ ದುರಂತಗಳಲ್ಲಿ ರಾಜಕೀಯ ನಾಯಕರು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಬೇರೆಬೇರೆ ರಾಷ್ಟ್ರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಕುರಿತ ಹಿನ್ನೋಟ ಇಲ್ಲಿದೆ.
ಸ್ವೀಡನ್ ಪ್ರಧಾನಿ ಅರ್ವಿಡ್ ಲಿಂಡ್‌ಮನ್ (1936)
ಸ್ವೀಡನ್‌ನ ಹಿಂದಿನ ಅಡ್ಮಿರಲ್ ಮತ್ತು ಎರಡು ಬಾರಿ ಸ್ವೀಡನ್‌ನ ಪ್ರಧಾನಮಂತ್ರಿ ಆಗಿದ್ದ ಸಾಲೋಮನ್ ಅರ್ವಿಡ್ ಅಚಾಟೆಸ್ ಲಿಂಡ್‌ಮನ್ ಪ್ರಭಾವಿ ಸಂಪ್ರದಾಯವಾದಿ ರಾಜಕಾರಣಿಯಾಗಿದ್ದರು. 1936ರ ಡಿಸೆಂಬರ್ 9ರಂದು ಲಿಂಡ್‌ಮನ್ ಅವರು ಪ್ರಯಾಣಿಸುತ್ತಿದ್ದ ಡಗ್ಲಾಸ್ ಡಿಸಿ-2 ಯುನೈಟೆಡ್ ಕಿಂಗ್‌ಡಂನ ಕ್ರೊಯ್ಡಾನ್ ವಿಮಾನವು ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಮನೆಗಳಿಗೆ ಅಪ್ಪಳಿಸಿದಾಗ ಮೃತಪಟ್ಟರು.
ಫಿಲಿಪೈನ್ಸ್ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ (1957)
ಫಿಲಿಪೈನ್ಸ್‌ನ ಏಳನೇ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರು ತಮ್ಮ ಬಲವಾದ ಭ್ರಷ್ಟಾಚಾರ ವಿರೋಧಿ ನಿಲುವು ಮತ್ತು ಜನಪ್ರಿಯ ಕಾರ್ಯಕ್ಕೆ ಹೆಸರುವಾಸಿಯಾಗಿದ್ದರು. ಅವರ ಅಧ್ಯಕ್ಷತೆಯು 1957ರ ಮಾರ್ಚ್ 17ರಂದು ಥಟ್ಟನೆ ಕೊನೆಗೊಂಡಿತು. “ಮೌಂಟ್ ಪಿನಾಟುಬೊ” ಎಂದು ಕರೆಯಲ್ಪಡುವ ಅವರ ಸಿ-47 ವಿಮಾನವು ಸೆಬು ನಗರದ ಮನುಂಗಲ್ ಪರ್ವತಕ್ಕೆ ಅಪ್ಪಳಿಸಿತು. ಆಗ ಮ್ಯಾಗ್ಸೆಸೆ ಮೃತಪಟ್ಟರು. 25 ಪ್ರಯಾಣಿಕರ ಪೈಕಿ ಒಬ್ಬರು ಮಾತ್ರ ಬದುಕುಳಿದಿದ್ದರು.
ಬ್ರೆಜಿಲ್ ಅಧ್ಯಕ್ಷ ನೆರೆಯು ರಾಮೋಸ್ (1958)
ಬ್ರೆಜಿಲ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು 1958ರ ಜೂನ್ 16ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟರು.
ಇರಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಆರಿಫ್ (1966)
ಇರಾಕ್‌ನ ಎರಡನೇ ಅಧ್ಯಕ್ಷರಾದ ಅಬ್ದುಲ್ ಸಲಾಂ ಆರಿಫ್ ರಾಜಪ್ರಭುತ್ವವನ್ನು ಉರುಳಿಸಿದ 1958ರ ಕ್ರಾಂತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 1966ರ ಏಪ್ರಿಲ್ 13ರಂದು ಆರಿಫ್ ಅವರ ಇರಾಕಿ ಏರ್ ಫೋರ್ಸ್ ವಿಮಾನ, ಡಿ ಹ್ಯಾವಿಲ್ಯಾಂಡ್ ಡಿಹೆಚ್ 104 ಡೋವ್, ಬಸ್ರಾ ಬಳಿ ಅಪಘಾತಕ್ಕೀಡಾದಾಗ ನಿಧನರಾದರು. ಅವರ ಸಹೋದರ ಅಬ್ದುಲ್ ರಹಮಾನ್ ಆರಿಫ್ ಅವರ ಅನಂತರ ಅಧ್ಯಕ್ಷರಾದರು.
ಬ್ರೆಜಿಲ್ ಅಧ್ಯಕ್ಷ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ (1967)
ಬ್ರೆಜಿಲ್‌ನ 26ನೇ ಅಧ್ಯಕ್ಷ ಮತ್ತು ಮಾಜಿ ಮಿಲಿಟರಿ ಸರ್ವಾಧಿಕಾರದ ಪ್ರಮುಖ ವ್ಯಕ್ತಿಯಾಗಿದ್ದ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ 1967ರ ಜುಲೈ 18ರಂದು ನಿಧನರಾದರು. ಅವರ ಅಧ್ಯಕ್ಷೀಯ ಅವಧಿ ಮುಗಿದ ಸ್ವಲ್ಪ ಸಮಯದ ಅನಂತರ ಕ್ಯಾಸ್ಟೆಲೊ ಬ್ರಾಂಕೋ ಅವರ ಪೈಪರ್ ಪಿಎ -23 ಅಜ್ಟೆಕ್ ವಿಮಾನ ಬ್ರೆಜಿಲಿಯನ್ ವಾಯುಪಡೆ ವಿಮಾನಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತು. ಅವರ ಸಾವು ಭಾರಿ ಚರ್ಚೆಗೆ ಕಾರಣವಾಗಿತ್ತು.
ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ (1980)
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 23ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ತಾವು ಚಲಾಯಿಸುತ್ತಿದ್ದ ವಿಮಾನದ ನಿಯಂತ್ರಣವನ್ನು ಕಳೆದುಕೊಂಡು ದುರಂತ ಸಾವು ಕಂಡರು.
ಲೆಬನಾನ್ ಪ್ರಧಾನಿ ರಶೀದ್ ಕರಾಮಿ (1987)
ಲೆಬನಾನ್‌ನ ಅತಿ ಹೆಚ್ಚು ಬಾರಿ ಚುನಾಯಿತರಾದ ಪ್ರಧಾನಮಂತ್ರಿ ರಶೀದ್ ಕರಾಮಿ ಅವರು ಲೆಬನಾನಿನ ಅಂತರ್ಯುದ್ಧದ ಸಮಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1987ರ ಜೂನ್ 1ರಂದು, ಬೈರುತ್‌ಗೆ ಹೋಗುವ ಮಾರ್ಗದಲ್ಲಿ ಅವರ ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಗೊಂಡು ಕರಾಮಿ ಕೊಲ್ಲಲ್ಪಟ್ಟರು.
ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ (1988)
ಪಾಕಿಸ್ತಾನದ ಆರನೇ ಅಧ್ಯಕ್ಷರಾದ ಜನರಲ್ ಮುಹಮ್ಮದ್ ಜಿಯಾ-ಉಲ್-ಹಕ್ ಅವರು 1988ರ ಆಗಸ್ಟ್ 17ರಂದು ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಸಿ-130 ಹರ್ಕ್ಯುಲಸ್ ವಿಮಾನವು ಬಹವಾಲ್‌ಪುರದಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಅಪಘಾತಕ್ಕೀಡಾಯಿತು. ಅಪಘಾತದ ಕಾರಣವು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇದನ್ನೂ ಓದಿ: Ebrahim Raisi: ಹೆಲಿಕಾಫ್ಟರ್ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?
ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ (2001)
ಮಾಧವರಾವ್ ಸಿಂಧಿಯಾ ಭಾರತದ ಪ್ರಮುಖ ರಾಜಕಾರಣಿ ಮತ್ತು ಕಾಂಗ್ರೆಸ್ ನಾಯಕರಾಗಿದ್ದರು. 2001ರ ಸೆಪ್ಟೆಂಬರ್ 30ರಂದು ವಿಮಾನ ಅಪಘಾತದಲ್ಲಿ ದಾರುಣ ಅಂತ್ಯ ಕಂಡರು. ಉತ್ತರ ಪ್ರದೇಶದ ಮೈನ್‌ಪುರಿ ಬಳಿ ಅವರ ಖಾಸಗಿ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ 90 ಗಾಳಿಯಲ್ಲಿ ಬೆಂಕಿ ಹೊತ್ತಿಕೊಂಡು ಅಪಘಾತ ಸಂಭವಿಸಿತ್ತು.
ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ (2024)
ಚಿಲಿಯ ಮಾಜಿ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿಮೆರಾ ಅವರು ಫೆಬ್ರವರಿ 2024ರಲ್ಲಿ ನಿಧನರಾದರು. ಪಿನೆರಾ ಅವರ ಹೆಲಿಕಾಪ್ಟರ್ ದಕ್ಷಿಣ ಚಿಲಿಯ ಸರೋವರಕ್ಕೆ ಅಪ್ಪಳಿಸಿತು. ಈ ದುರಂತದಲ್ಲಿ ಅವರು ಪ್ರಾಣ ಕಳೆದುಕೊಂಡರು. ಅವರು ಸತತ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ ಎಸ್ ರಾಜಶೇಖರ್ ರೆಡ್ಡಿ ಅವರೂ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು.