ಲಂಡನ್: ಏರ್ ಇಂಡಿಯಾ ವಿಮಾನದ ಗಗನಸಖಿ (Air India Hostess)ಯೊಬ್ಬರ ಮೇಲೆ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಗಗನಸಖಿ ತಂಗಿದ್ದ ಹೋಟೆಲ್ ರೂಮ್‌ಗೆ ನುಗ್ಗಿದ ಅಪರಿಚಿತನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಲಂಡನ್‌ನ ಹೀಥ್ರೂನಲ್ಲಿರುವ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಆಗಸ್ಟ್ 15ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏರ್ ಇಂಡಿಯಾ ವಿಮಾನದ ಹಲವು ಸಿಬ್ಬಂದಿ ತಂಗಿರುವ ಈ ಹೋಟೆಲ್‌ಗೆ ನುಗ್ಗಿದ ದುಷ್ಕರ್ಮಿ ಏಕಾಏಕಿ ದಾಳಿ ನಡೆಸಿದ್ದಾನೆ. ಸದ್ಯ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಹಲ್ಲೆಗೊಳಗಾದ ಗಗನಸಖಿಗೆ ಸೂಕ್ತ ಚಿಕಿತ್ಸೆ ನೀಡಿ ಭಾರತಕ್ಕರ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.
The news report 👇🏾pertaining to the sexual assault on an @airindia Crew Member in London is very disturbing.
— Manish Tewari (@ManishTewari) August 18, 2024
What makes it even more galling is that the Cabin Crew had been repeatedly complaining about the lack of Security in the hotel in London , inadequate lighting and the…
“ಪ್ರಮುಖ ಅಂತಾರಾಷ್ಟ್ರೀಯ ಹೋಟೆಲ್‌ನಲ್ಲಿ ನಡೆದ ಈ ಕಾನೂನುಬಾಹಿರ ಒಳನುಸುಳುವಿಕೆಯಿಂದ ಆಘಾತಕ್ಕೆ ಒಳಗಾಗಿದ್ದೇವೆ. ಇದು ನಮ್ಮ ಸಿಬ್ಬಂದಿಯೊಬ್ಬರ ಮೇಲೆ ಪರಿಣಾಮ ಬೀರಿದೆ. ಕೌನ್ಸಿಲಿಂಗ್ ಸೇರಿದಂತೆ ನಮ್ಮ ಸಹೋದ್ಯೋಗಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆʼʼ ಎಂದು ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾ ವಿಮಾನದ ಸಿಬ್ಬಂದಿ ತಂಗಿರುವ ಹೋಟೆಲ್‌ನಲ್ಲಿ ಮಧ್ಯರಾತ್ರಿಯ ವೇಳೆಗೆ ಈ ಘಟನೆ ನಡೆದಿದೆ. ʼʼಗಗನಸಖಿ ತಮ್ಮ ರೂಮ್‌ನಲ್ಲಿ ನಿದ್ರಿಸುತ್ತಿದ್ದರು. ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಆಗಂತುಕನೊಬ್ಬ ಗಗನಸಖಿಯ ರೂಮ್‌ಗೆ ನುಗ್ಗಿದ. ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೊಳಗಾದ ಆಕೆ ಕೂಡಲೇ ಸಹಾಯಕ್ಕಾಗಿ ಕೂಗಿಕೊಂಡರು. ಸಿಟ್ಟಿನಿಂದ ಆತ ಹ್ಯಾಂಗರ್‌ನಿಂದ ಹಲ್ಲೆ ನಡೆಸಿದ. ಅಲ್ಲದೆ ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆಯನ್ನು ನೆಲಕ್ಕೆ ಕೆಡವಿ ಎಳೆದಾಡಿದ್ದಾನೆʼʼ ಎಂದು ಮೂಲಗಳು ತಿಳಿಸಿವೆ.
ಈ ದಾಳಿಯಿಂದ ಗಗನಸಖಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಪೊಲೀಸರನ್ನು ಕರೆಸಿ ಆತನನ್ನು ಅವರ ವಶಕ್ಕೆ ಒಪ್ಪಿಸಲಾಯಿತು. ದಾಳಿಗೊಳಗಾದ ಗಗನಸಖಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರೊಂದಿಗೆ ಸ್ನೇಹಿತರು ಉಳಿದುಕೊಂಡಿದ್ದರು. ಈ ಹಿಂದೆಯೂ ವಿಮಾನ ಸಿಬ್ಬಂದಿ ತಮಗಾಗುತ್ತಿರುವ ಕರಾಳ ಅನುಭವಗಳ ಬಗ್ಗೆ ದೂರು ನೀಡಿದ್ದರು. ಸೂಕ್ತ ದೀಪದ ವ್ಯವಸ್ಥೆ ಇಲ್ಲದಿರುವುದು, ಪದೇ ಪದೆ ಬಾಗಿಲು ತಟ್ಟುವುದು ಇತ್ಯಾದಿ ಅನುಭವಗಳ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ದುಷ್ಕರ್ಮಿ ಯಾಕಾಗಿ ಈ ದಾಳಿ ನಡೆಸಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Air India: ಟೀಮ್ ಇಂಡಿಯಾ ಆಟಗಾರರನ್ನು ಕರೆ ತಂದ ಏರ್ ಇಂಡಿಯಾಗೆ ವರದಿ ಕೇಳಿದ ಡಿಜಿಸಿಎ; ಕಾರಣವೇನು?
ಏರ್ ಇಂಡಿಯಾ ಹೇಳಿದ್ದೇನು?
ಏರ್ ಇಂಡಿಯಾ ವಕ್ತಾರರು ಈ ಘಟನೆ ಬಗ್ಗೆ ಮಾತನಾಡಿ, ವಿಮಾನಯಾನ ಸಿಬ್ಬಂದಿಗೆ ಕೌನ್ಸಿಲಿಂಗ್ ಸೇರಿದಂತೆ ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಬದ್ಧ ಎಂದು ಹೇಳಿದ್ದಾರೆ. ಜತೆಗೆ ತನ್ನ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಏರ್ ಇಂಡಿಯಾ ಆದ್ಯತೆ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ. ʼʼಈ ವಿಷಯವನ್ನು ಕಾನೂನಿನ ವ್ಯಾಪ್ತಿಗೆ ತರಲು ಏರ್ ಇಂಡಿಯಾ ಸ್ಥಳೀಯ ಪೊಲೀಸರೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಜತೆಗೆ ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಹೋಟೆಲ್ ಆಡಳಿತ ಮಂಡಳಿಗೆ ಸೂಚಿಸಲಾಗಿದೆʼʼ ಎಂದು ವಕ್ತಾರರು ಹೇಳಿದ್ದಾರೆ.