ವಾಷಿಂಗ್ಟನ್: ಗಾಡ್‌ಫಾದರ್ ಸಿನಮಾ ಖ್ಯಾತಿಯ ಹಾಲಿವುಡ್ (Hollywood) ದಂತಕತೆ, ನಟ, 83 ವರ್ಷದ ಅಲ್ ಪಸಿನೋ ಅವರ ಗರ್ಲ್‌ಫ್ರೆಂಡ್, 29 ವರ್ಷದ ನೂರ್ ಅಲ್ಫಾಲ್ಲಾಹ್ ಅವರು ಗರ್ಭವತಿ ಎಂಬ ಸುದ್ದಿ ಹರಡಿದ ಬೆನ್ನಲ್ಲೇ, ನಾನು ನೂರ್ ಅಲ್ಫಾಲ್ಲಾಹ್ ಮಗುವಿಗೆ ತಂದೆ ಅಲ್ಲ ಎಂದು ಹಾಲಿವುಡ್ ಅಲ್ ಪಸಿನೋ ಹೇಳಿದ್ದಾರೆ. ಅಲ್ಲದೆ, ನೂರ್ ಅಲ್ಫಾಲ್ಲಾಹ್ ಅವರು ಪಿತೃತ್ವ ಪರೀಕ್ಷೆ (Paternity Test) ಮಾಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ನನಗೆ ಬಂಜೆತನಕ್ಕೆ ಸಂಬಂಧಿಸಿದ ಕಾಯಿ ಇದೆ. ಹಾಗಾಗಿ, ನೂರ್ ಅಲ್ಫಾಲ್ಲಾಹ್ ಮಗುವಿಗೆ ನಾನೇ ತಂದೆಯಾಗಿರುವುದು ಕಷ್ಟ ಸಾಧ್ಯ. ಹಾಗಾಗಿ, ನೂರ್ ಅಲ್ಫಾಲ್ಲಾಹ್ ಅವರು ಪಿತೃತ್ವ ಪರೀಕ್ಷೆ ಮಾಡಿಸಿಕೊಳ್ಳಬೇಕು” ಎಂದು ಅಲ್ ಪಸಿನೋ ಹೇಳಿದ್ದಾರೆ. ಇನ್ನೂ, ನೂರ್ ಅಲ್ಫಾಲ್ಲಾಹ್ ಅವರು ಈಗಾಗಲೇ ಪಿತೃತ್ವ ಪರೀಕ್ಷೆ ಮಾಡಿಸಿಕೊಂಡಿದ್ದು, ಅಲ್ ಪಸಿನೋ ಅವರೇ ಮಗುವಿನ ತಂದೆ ಎಂಬುದಾಗಿ ವೈದ್ಯಕೀಯ ವರದಿ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಲ್ ಪಸಿನೊ ಮತ್ತು ನೂರ್ ಕಳೆದ ವರ್ಷ ಏಪ್ರಿಲ್‌ನಿಂದ ಪ್ರೀತಿ ಮಾಡುತ್ತಿರುವುದಾಗಿ ವರದಿಯಾಗಿತ್ತು. ಇಬ್ಬರೂ ಒಟ್ಟಾಗಿ ರಾತ್ರಿಯ ಊಟ ಮಾಡಿದ್ದ ಫೋಟೊ ಹರಿದಾಡಿತ್ತು. ಕೊರೊನಾ ಸಂದರ್ಭದಲ್ಲಿ ಇಬ್ಬರೂ ಡೇಟ್ ಮಾಡಿದ್ದರು ಎಂದು ಕೂಡ ತಿಳಿದುಬಂದಿದೆ. ಅಲ್ಲದೆ, ಕೆಲ ದಿನಗಳ ಹಿಂದಷ್ಟೇ ನೂರ್ ಗರ್ಭವತಿ ಎಂಬ ಸುದ್ದಿ ಜಾಗತಿಕವಾಗಿ ಹರಡಿದೆ. ಈಗ ಅಲ್ ಪಸಿನೋ ಅವರು ನೀಡಿದ ಹೇಳಿಕೆ ಗೊಂದಲ ಮೂಡಿಸಿದೆ.
ಅಲ್ ಪಸಿನೋ ಅವರು ಮದುವೆಯಾಗಿಲ್ಲ. ಆದರೂ, ಅವರಿಗೆ ಮೂವರು ಮಕ್ಕಳಿದ್ದಾರೆ. ಅಲ್ ಪಸಿನೊ ಅವರು ಈ ಹಿಂದೆ ಆಕ್ಟಿಂಗ್ ಕೋಚ್ ಜಾನ್ ಟರ್ರಂಟ್ ಅವರೊಂದಿಗೆ ಪ್ರೀತಿಯಲ್ಲಿದ್ದರು. ಅವರಿಬ್ಬರಿಗೆ ಜೂಲಿ ಮೇರಿ(33) ಹೆಸರಿನ ಮಗಳಿದ್ದಾಳೆ. ಹಾಗೆಯೇ ಅಲ್ ಪಸಿನೊ ಅವರು ಬೆವೆರ್ಲಿ ಡಿ ಏಂಜಲೋ ಜತೆಯಲ್ಲಿ 1997ರಿಂದ 2003ರವರೆಗೆ ಪ್ರೀತಿಯಲ್ಲಿದ್ದರು. ಆಗ ಅವರಿಗೆ ಆಂಟನ್ ಮತ್ತು ಒಲಿವಿಯಾ ಹೆಸರಿನ ಅವಳಿ ಮಕ್ಕಳು ಹುಟ್ಟಿದ್ದರು. ಇದೀಗ ಈ ಮಕ್ಕಳಿಗೆ 22 ವರ್ಷ ವಯಸ್ಸು. ಇದರ ಬೆನ್ನಲ್ಲೇ, ನೂರ್ ಅಲ್ಫಾಲ್ಲಾಹ್ ಪ್ರೀತಿಯ ಬಲೆಗೆ ಅಲ್ ಪಸಿನೋ ಬಿದ್ದಿದ್ದರು.
ಇದನ್ನೂ ಓದಿ: Hollywood : 494 ಕೋಟಿಯ ಮನೆಗೆ ಶಿಫ್ಟ್ ಆದ ಹಾಲಿವುಡ್ ಜೋಡಿ! ಈ ಮನೆ ಹೇಗಿದೆ ನೋಡಿ!
ಅಲ್ ಪಸಿನೋ ಅವರ ಗರ್ಲ್‌ಫ್ರೆಂಡ್ ನೂರ್ ಅಲ್ಫಾಲ್ಲಾಹ್ ಅವರೀಗ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಇನ್ನೊಂದು ತಿಂಗಳಲ್ಲಿ ನಾಲ್ಕನೇ ಮಗುವಿಗೆ ಅಲ್ ಪಸಿನೋ ತಂದೆಯಾಗಲಿದ್ದಾರೆ ಎಂದೇ ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇದುವರೆಗೆ ಈ ಕುರಿತು ನೂರ್ ಅಲ್ಫಾಲ್ಲಾಹ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ ಪಸಿನೊ ಅವರ ಹಾಲಿ ಪ್ರಿಯತಮೆ ನೂರ್ ಅಲ್ಫಲ್ಲಾ ಕೂಡ ಈ ಹಿಂದೆ ಹಲವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ನಿರ್ದೇಶಕಿಯಾಗಿರುವ ಅವರು ಹಿರಿಯ ಗಾಯಕ ಮಿಕ್ ಜಾಗ್ಗರ್, ಕೋಟ್ಯಧಿಪತಿ ನಿಕೋಲಸ್ ಬರ್ಗ್ರುಯೆನ್ ಅವರೊಂದಿಗೆ ಪ್ರೀತಿಯಲ್ಲಿದ್ದರು.