ವಾಷಿಂಗ್ಟನ್: ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್ ಖೈದಾದ ನಾಯಕ ಅಯೂಮನ್ ಅಲ್-ಜವಾಹಿರಿಯನ್ನು ಡ್ರೋನ್ ದಾಳಿಯ ಮೂಲಕ ಹತ್ಯೆಗೈದಿರುವುದಾಗಿ ಅಮೆರಿಕ ಘೋಷಿಸಿದೆ. ಹತ್ಯೆಯನ್ನು ಅಮೆರಿಕ ಅಧ್ಯಕ್ಷ ಜೊ ಬೈಡೆನ್ ದೃಢಪಡಿಸಿದ್ದಾರೆ.
ಅಮೆರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ) ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಾನುವಾರ ನಡೆಸಿದ ಡ್ರೋನ್ ದಾಳಿಯಲ್ಲಿ ಜವಾಹಿರಿ ಹತನಾಗಿದ್ದಾನೆ ಎಂದು ಅಮೆರಿಕ ತಿಳಿಸಿದೆ. ಇದರೊಂದಿಗೆ ಅಲ್ ಖೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್ ನಂತರ ಭಯೋತ್ಪಾದಕ ಸಂಘಟನೆಯ ದೊಡ್ಡ ನಾಯಕನನ್ನು ಹತ್ಯೆ ಮಾಡಿದಂತಾಗಿದೆ. ಅಲ್ ಖೈದಾ ಸಂಘಟನೆಗೆ ಇದು ಭಾರಿ ಹೊಡೆತ ಎಂದು ವರದಿಯಾಗಿದೆ. ಲಾಡೆನ್ ಹತ್ಯೆಯ ಬಳಿಕ ಜವಾಹಿರಿಯೇ ಅಲ್ ಖೈದಾದ ನೇತೃತ್ವ ವಹಿಸಿದ್ದ. ಈತನ ತಲೆಗೆ ೨೫ ದಶಲಕ್ಷ ಡಾಲರ್ (೨೦೦ ಕೋಟಿ ರೂ. ಬಹುಮಾನ) ಘೋಷಿಸಲಾಗಿತ್ತು. ಈಜಿಪ್ತ್‌ನಲ್ಲಿ ಸರ್ಜನ್ ಆಗಿದ್ದ ಜವಾಹಿರಿ ಉಗ್ರನಾಗಿ ಬದಲಾಗಿದ್ದ. ಅಮೆರಿಕದಲ್ಲಿ ೨೦೦೧ರ ಸೆಪ್ಟೆಂಬರ್ ೧೧ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಲಾಡೆನ್‌ಗೆ ಸಹಕರಿಸಿದ್ದ. ಈ ದಾಳಿಯಲ್ಲಿ ಸುಮಾರು ೩,೦೦೦ ನಾಗರಿಕರು ಸಾವಿಗೀಡಾಗಿದ್ದರು.
ಅಮೆರಿಕ ಅಧ್ಯಕ್ಷ ಜೊ ಬೈಡೆನ್ ” ಅಮೆರಿಕದ ನಾಗರಿಕರ ವಿರುದ್ಧ ಹಿಂಸಾಚಾರ ನಡೆಸಿದ್ದ ಭಯೋತ್ಪಾದಕ ಈಗ ಇಲ್ಲ. ಇದರೊಂದಿಗೆ ಅಮೆರಿಕದಲ್ಲಿ ಭಯೋತ್ಪಾದನೆಗೆ ಬಲಿಯಾಗಿರುವ ನಾಗರಿಕರಿಗೆ ನ್ಯಾಯ ಸಿಕ್ಕಿದಂತಾಗಿದೆʼʼ ಎಂದಿದ್ದಾರೆ.
ಬಾಲ್ಕನಿಯಲ್ಲಿದ್ದ ಜವಾಹಿರಿ ಹತ್ಯೆ: ಭಯೋತ್ಪಾದಕ ಜವಾಹಿರಿ ಮನೆಯ ಬಾಲ್ಕನಿಯಲ್ಲಿದ್ದಾಗ ಡ್ರೋನ್ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಲಿಬಾನ್ ಖಂಡನೆ: ಈ ಡ್ರೋನ್ ದಾಳಿಯನ್ನು ಖಚಿತಪಡಿಸಿರುವ ತಾಲಿಬಾನ್ ವಕ್ತಾರ ಜಬಿಉಲ್ಲಾ ಮುಜಾಹಿದ್, ತೀವ್ರವಾಗಿ ಖಂಡಿಸಿದ್ದಾರೆ. ಇದರಿಂದ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದಿದ್ದಾರೆ.