Site icon Vistara News

171 ಬೋಯಿಂಗ್‌ ವಿಮಾನಗಳ ಹಾರಾಟ ರದ್ದುಗೊಳಿಸಿದ ಅಮೆರಿಕ; ಏನಿದಕ್ಕೆ ಕಾರಣ?

Alaska Flight

Alaska incident: US aviation regulator grounds all Boeing 737-9 Max planes

ವಾಷಿಂಗ್ಟನ್:‌ ಕೆಲ ದಿನಗಳ ಹಿಂದೆ ಅಲಾಸ್ಕ ವಿಮಾನಯಾನ ಸಂಸ್ಥೆಯ ಬೋಯಿಂಗ್‌ ವಿಮಾನದ ಬಾಗಿಲು ಹಾರಾಡುತ್ತಿರುವಾಗಲೇ ಕಳಚಿ ಬಿದ್ದ ಪ್ರಕರಣವು (Alaska Incident) ಭಾರಿ ಸುದ್ದಿಯಾದ ಬೆನ್ನಲ್ಲೇ ಅಮೆರಿಕದಲ್ಲಿ ಬೋಯಿಂಗ್‌ 737-9 ಮ್ಯಾಕ್ಸ್ ಸರಣಿಯ (Boeing 737-9 MAX) ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಅಲಾಸ್ಕ ವಿಮಾನ ದುರಂತ ಪ್ರಕರಣದ ಬಳಿಕ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿದ್ದು, ಕೆಲ ಬೋಯಿಂಗ್‌ ವಿಮಾನಗಳ ಬಿಡಿ ಭಾಗಗಳಲ್ಲಿ ದೋಷ ಕಂಡುಬಂದಿದೆ. ಹಾಗಾಗಿ, ಅಮೆರಿಕದ ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ (Federal Aviation Administration) ಬೋಯಿಂಗ್‌ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಅಲಾಸ್ಕ ವಿಮಾನ ಪ್ರಕರಣದ ಕುರಿತು ಅಲಾಸ್ಕ ವಿಮಾನಯಾನ ಸಂಸ್ಥೆಯ ಸಿಇಒ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಹೊಣೆಯನ್ನು ನಾವೇ ಹೊರುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಆದರೂ, ದೇಶದ ಹಲವು ವಿಮಾನಯಾನ ಸಂಸ್ಥೆಗಳ 171 ಬೋಯಿಂಗ್‌ 737-9 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಎಫ್‌ಎಎ ಸ್ಥಗಿತಗೊಳಸಿದೆ. ದೇಶದೊಳಗೆ ಬೋಯಿಂಗ್‌ 737-9 ಮ್ಯಾಕ್ಸ್ ವಿಮಾನಗಳು ಹಾರಾಟ ನಡೆಸುವಂತಿಲ್ಲ ಎಂದು ಆದೇಶಿಸಿದೆ. ಅಲಾಸ್ಕ ದುರಂತದ ಬಳಿಕ ನೂರಾರು ಪ್ರಯಾಣಿಕರು ಬೋಯಿಂಗ್‌ ವಿಮಾನಗಳ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದು ಹಾಗೂ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಅಲಾಸ್ಕ ವಿಮಾನದ ಬಾಗಿಲು ಮುರಿದ ವಿಡಿಯೊ

ಕೆಲ ದಿನಗಳ ಹಿಂದಷ್ಟೇ ಒರೆಗಾನ್ (Oregon) ದೇಶದಿಂದ ಅಲಾಸ್ಕ ವಿಮಾನಯಾನ ಸಂಸ್ಥೆಯ ವಿಮಾನವು (Alaska Flight) ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದರ ಬಾಗಿಲು ಕಳಚಿಬಿದ್ದ ಕಾರಣ ಪ್ರಯಾಣಿಕರು ವಿಮಾನದಲ್ಲಿಯೇ ಬೆಚ್ಚಿಬಿದ್ದಿದ್ದರು. ವಿಮಾನದ ಕಿಟಕಿ ಕಳಚಿ ಬೀಳುತ್ತಲೇ ಎಚ್ಚೆತ್ತ ಪೈಲಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದರು. ಇದರಿಂದಾಗಿ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿರಲಿಲ್ಲ. ವಿಮಾನದ ಕಿಟಕಿ ಕಳಚಿ ಬಿದ್ದ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: Japan Planes collide: ಜಪಾನ್‌ನಲ್ಲಿ ವಿಮಾನ ದುರಂತ; 6 ಕೋಸ್ಟ್ ಗಾರ್ಡ್ ಸಿಬ್ಬಂದಿ ಪೈಕಿ ಐವರು ಸಾವು

ಒರೆಗಾನ್‌ ದೇಶದ ಪೋರ್ಟ್‌ಲ್ಯಾಂಡ್‌ನಿಂದ ಒಂಟಾರಿಯೋಗೆ ಅಲಾಸ್ಕ ವಿಮಾನಯಾನ ಸಂಸ್ಥೆಯ ಎಎಸ್ 1282 ಬೋಯಿಂಗ್‌ ವಿಮಾನವು ಹಾರಾಟ ಆರಂಭಿಸಿತ್ತು. ಸುಮಾರು 16 ಸಾವಿರ ಅಡಿ ಎತ್ತರಕ್ಕೆ ಹಾರುತ್ತಲೇ ವಿಮಾನದ ಕಿಟಕಿಯು ಕಳಚಿ ಬಿದ್ದಿತ್ತು. ವಿಮಾನದ ಕಿಟಕಿ ಬೀಳುತ್ತಲೇ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಅದರಲ್ಲೂ, ವಿಮಾನದೊಳಗೆ ಜೋರು ಗಾಳಿ ಬೀಸಿಬಂದ ಕಾರಣ ಪ್ರಯಾಣಿಕರು ಇನ್ನಷ್ಟು ಭಯಭೀತರಾಗಿದ್ದರು. ಕೆಲವೊಬ್ಬರ ಮೊಬೈಲ್‌ಗಳು ಕೂಡ ಕೆಳಗೆ ಬಿದ್ದಿವೆ ಎಂದು ತಿಳಿದುಬಂದಿತ್ತು. ಅಪಾಯದ ಮುನ್ಸೂಚನೆ ಅರಿತ ಪೈಲಟ್‌, ಕೂಡಲೇ ಪೋರ್ಟ್‌ಲ್ಯಾಂಡ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಿದ ಕಾರಣ ಪ್ರಯಾಣಿಕರಿಗೆ ತೊಂದರೆ ಆಗಿರಲಿಲ್ಲ. ಆದರೂ, ಘಟನೆಯ ಬಳಿಕ ನೂರಾರು ಪ್ರಯಾಣಿಕರು ಬೋಯಿಂಗ್‌ ವಿಮಾನಗಳ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version