ಶಾರ್ಲೆಟ್: ಅಮೆರಿಕದಲ್ಲಿ ಮತ್ತೆ ಶೂಟೌಟ್(America Shootout) ಆಗಿದ್ದು, ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಪೊಲೀಸ್ ಅಧಿಕಾರಿಗಳು(Police officers) ಬಲಿಯಾಗಿದ್ದು, ಮತ್ತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಕೆರೋಲಿನಾ(North Carolina)ದ ಮನೆಯೊಂದಕ್ಕೆ ಬಂದೂಕುಧಾರಿ(ಯೊಬ್ಬ ನುಗ್ಗಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನನ್ನು ಹಿಡಿಯ ಮುಂದಾದರು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ಪೊಲೀಸರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ಬಗ್ಗೆ ಶಾರ್ಲೆಟ್-ಮೆಕ್ಲೆನ್‌ಬರ್ಗ್ ಪೊಲೀಸ್ ಅಧಿಕಾರಿ ಜಾನಿ ಜೆನ್ನಿಂಗ್ಸ್ ಮಾಹಿತಿ ನೀಡಿದ್ದು, ಅಮಾಯಕ ಜನರ ರಕ್ಷಣೆಗೆಂದು ಕೆಲವು ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ದುಷ್ಕರ್ಮಿ ಇದ್ದಕ್ಕಿದ್ದಂತೆ ಗುಂಡು ಹಾರಿಸಲು ಶುರು ಮಾಡಿದ್ದಾನೆ. ದುರಾದೃಷ್ಟವಶಾತ್ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಾಣದ ಹಂಗು ತೊರೆದು ಹೋರಾಡಿದ ನಮ್ಮ ನಾಲ್ವರು ಧೀರ ಪೊಲೀಸ್ ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ. ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಮನೆಯೊಳಗೆ ಪೊಲೀಸರಿಗೆ ನುಗ್ಗಲು ಸಾಧ್ಯವಾಗಿತ್ತು. ಮನೆಯ ಹೊರಗೆ ನಿಲ್ಲಿಸಿದ್ದ ಶಸ್ತ್ರ ಸಜ್ಜಿತ ಪೊಲೀಸ್ ವಾಹನಗಳು, ಮರ ಗಿಡಗಳು ಸಂಪೂರ್ಣವಾಗಿ ಗುಂಡಿನ ದಾಳಿಗೆ ಧ್ವಂಸಗೊಂಡಿದ್ದವು. ಕೊನೆಗೂ ದುಷ್ಕರ್ಮಿಯನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಯಶಸ್ವಿಯಾದರು ಎಂದು ತಿಳಿಸಿದರು.
#Charlotte shooting footage. pic.twitter.com/hzAMwScorh
— GameTechPolitics (@GTP_Podcast) April 30, 2024
ಮನೆಯ ಒಳಗೆ ಪ್ರವೇಶಿಸಿದಾಗ ಮತ್ತೋರ್ವ ದುಷ್ಕರ್ಮಿ ಹಾಗೂ ಮಹಿಳೆ ಮತ್ತು 17 ವರ್ಷದ ಬಾಲಕ ಅಲ್ಲಿದ್ದರು. ದುಷ್ಕರ್ಮಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಅವರ ಹೆಸರು ಬಹಿರಂಗಪಡಿಸಿಲ್ಲ. ಇನ್ನು ಮಹಿಳೆ ಮತ್ತು ಬಾಲಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. ಹುತಾತ್ಮರಾದ ಅಧಿಕಾರಿಗಳ ಕುಟುಂಬಸ್ಥರನ್ನು ಭೇಟಿಯಾಗಿರುವ ಅಲ್ಲಿನ ಗವರ್ನರ್ ಸಾಂತ್ವನ ಹೇಳಿದ್ದಾರೆ. ಇನ್ನು ಗಾಯಗೊಂಡಿರುವ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ದುರ್ಘಟನೆಗೆ ಕಾರಣ ಏನು? ದುಷ್ಕರ್ಮಿ ಏಕೆ ಅಲ್ಲಿದ್ದ? ಮಹಿಳೆ ಮತ್ತು ಬಾಲಕ ಏಕೆ ಅಲ್ಲಿದ್ದರು ಹೀಗೆ ಅನೇಕ ಪ್ರಶ್ನೆಗಳಿಗೆ ತನಿಖೆಯಲ್ಲಿ ಉತ್ತರ ಸಿಗಲಿದೆ ಎಂದು ಜೆನ್ನಿಂಗ್ ಹೇಳಿದಾರೆ.
ಅಮೆರಿಕದಲ್ಲಿ ಕಳೆದ ವರ್ಷವೂ ಒಂದೇ ದಿನ ಮೂರು ಸ್ಥಳಗಳಲ್ಲಿ ಶೂಟೌಟ್ ನಡೆದಿತ್ತು ಘಟನೆಯಲ್ಲಿ ಒಟ್ಟು 9 ಜನರು ಮೃತಪಟ್ಟಿದ್ದರು. ಫಿಲಡೆಲ್ಫಿಯಾದಲ್ಲಿ ಮೊದಲು ಇಬ್ಬರ ನಡುವೆ ಗಲಾಟೆ-ಜಗಳ ಶುರುವಾಗಿತ್ತು. ಅವರು ಕೆಲವೇ ಹೊತ್ತಲ್ಲಿ ಪರಸ್ಪರ ಗುಂಡು ಹಾರಿಸಿಕೊಳ್ಳಲು ಶುರು ಮಾಡಿದ್ದರು. ಈ ಹೊಡೆದಾಟದಲ್ಲಿ ಅಲ್ಲಿಯೇ ಇದ್ದ ಬಾರ್ & ರೆಸ್ಟೋರೆಂಟ್ ಮೇಲೆ ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದರು. 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಮೆರಿಕಾದಲ್ಲಿ ಇತ್ತೀಚೆಗೆ ಪದೇಪದೆ ಗುಂಡಿನ ದಾಳಿಯಾಗುತ್ತಿದೆ. ಇದಕ್ಕೂ ಮುನ್ನ ಟೆಕ್ಸಾಸ್‌ನ ಶಾಲೆಯೊಂದರಲ್ಲಿ ನಡೆದ ಶೂಟೌಟ್‌ನಲ್ಲಿ 19 ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕಿಯರು ಮೃತಪಟ್ಟಿದ್ದರು. ಅದಾದ ಮೇಲೆ ಓಕ್ಲಹಾಮಾದ ಆಸ್ಪತ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸರ್ಜನ್ ಸೇರಿ ಐವರ ಸಾವಾಗಿತ್ತು. ಅಷ್ಟಕ್ಕೇ ನಿಲ್ಲದೆ, ಮಿಲ್ವಾಕಿಯ ದಕ್ಷಿಣದಲ್ಲಿ ರೇಸಿನ್ ಪ್ರದೇಶದ ಸ್ಮಶಾನದಲ್ಲಿ ಮತ್ತು ಮಧ್ಯಪಶ್ಚಿಮ ಭಾಗದಲ್ಲಿರುವ ಅಯೋವಾದಲ್ಲಿನ ಕಾರ್ನರ್ ಸ್ಟೋನ್ ಚರ್ಚ್‌ನಲ್ಲಿ ಕೂಡ ಶೂಟೌಟ್ ಆಗಿತ್ತು.