ನವ ದೆಹಲಿ: ಯಾವುದೇ ಕಂಪನಿಯ ಆಡಳಿತ, ಸಂಸ್ಥೆಯ ವೆಚ್ಚವನ್ನು ಕಡಿಮೆ ಮಾಡಲು ನಿಶ್ಚಯ ಮಾಡಿದಾಗ ಮೊದಲು ಮಾಡುವುದೇ ಉದ್ಯೋಗ ಕಡಿತ. ಹೀಗೆ ಉದ್ಯೋಗ ಕಡಿತ ಮಾಡುವ ಸಂದರ್ಭದಲ್ಲಿ ಕಂಪನಿಯ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಆದರೆ ಬಾಸ್ಗಳು ಪಾರಾಗುತ್ತಾರೆ. ಈ ಪ್ರಕ್ರಿಯೆಗೆ ಮಾಧ್ಯಮ ಕ್ಷೇತ್ರವೂ ಹೊರತಲ್ಲ. ಈಗೀಗಂತೂ ಉದ್ಯೋಗ ಕಡಿತ ಎಂಬುದು ದೊಡ್ಡಮಟ್ಟದಲ್ಲೇ ಚಾಲ್ತಿಯಲ್ಲಿದೆ ಎನ್ನಬಹುದು.
ಆದರೆ ಅಮೆರಿಕನ್ ಸುದ್ದಿಪತ್ರಿಕೆಯೊಂದರ ಭಾರತ ಮೂಲದ ಸಂಪಾದಕರೊಬ್ಬರು ಒಂದು ವಿಶೇಷ ನಿರ್ಧಾರ ಕೈಗೊಂಡು ಮಾದರಿಯಾಗಿದ್ದಾರೆ. ಅಮೆರಿಕದ Detroit Free Press ಎಂಬ ಸುದ್ದಿಪತ್ರಿಕೆಯ ಉಪಾಧ್ಯಕ್ಷರೂ, ಸಂಪಾದಕರೂ ಆಗಿರುವ, ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪೀಟರ್ ಭಾಟಿಯಾ ಸ್ವತಃ ತಾವೇ ರಾಜೀನಾಮೆ ನೀಡುವ ಮೂಲಕ, ತಮ್ಮ ಪತ್ರಿಕೆಯ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದನ್ನು ತಪ್ಪಿಸಿದ್ದಾರೆ.
ಸಂಸ್ಥೆಯ ವೆಚ್ಚ ಕಡಿಮೆ ಮಾಡಲು ಉದ್ಯೋಗ ಕಡಿತ ಮಾಡುವಾಗ ಸಾಮಾನ್ಯವಾಗಿ ಸಣ್ಣ ಹುದ್ದೆಯಲ್ಲಿ ಇರುವವರೇ ಸಂಕಷ್ಟಕ್ಕೀಡಾಗುತ್ತಾರೆ. ಹೀಗೆ ಸಂಪಾದಕರೆಲ್ಲ ರಾಜೀನಾಮೆ ಕೊಡುವುದೆಲ್ಲ ತೀರ ಅಪರೂಪ. ಯಾವ ಸಂಪಾದಕರೂ ಅಥವಾ ಮ್ಯಾನೇಜರ್ಗಳೂ ಇದನ್ನು ಮಾಡುವುದಿಲ್ಲ ಎಂದರೂ ತಪ್ಪಾಗಲಾರದು.
ಹೀಗಿರುವಾಗ ಹಲವು ಉದ್ಯೋಗಿಗಳ ಕೆಲಸ ಉಳಿಸಲು ತಾನೇ ರಾಜೀನಾಮೆ ಕೊಟ್ಟ ಪೀಟರ್ ಭಾಟಿಯಾ ಮಾದರಿ ಎನ್ನಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಭಾಟಿಯಾ ‘ನಾವು ಆರ್ಥಿಕವಾಗಿ ಸಂಕಷ್ಟದ ಸಮಯದಲ್ಲಿ ಇದ್ದೇವೆ. ಹೀಗಾಗಿ ನಮ್ಮ ಕಂಪನಿಯಲ್ಲಿ ಉದ್ಯೋಗ ಕಡಿತ ಮಾಡುವುದು ಅನಿವಾರ್ಯ ಆಗುತ್ತಿದೆ. ನಾನು ಹೆಚ್ಚಿಗೆ ಸಂಬಳ ತೆಗೆದುಕೊಳ್ಳುತ್ತಿದ್ದೇನೆ. ನಾನೇ ರಾಜೀನಾಮೆ ಕೊಟ್ಟು ಅಷ್ಟು ಹಣ ಉಳಿಸಿದರೆ, ನನಗಿಂತಲೂ ಸಣ್ಣ ಹುದ್ದೆಯಲ್ಲಿ ಇದ್ದು, ಕಡಿಮೆ ಸಂಬಳ ತೆಗೆದುಕೊಳ್ಳುವವರ ಉದ್ಯೋಗ ಉಳಿಯುತ್ತದೆ. ನನ್ನ ಮಾಧ್ಯಮ ಸಂಸ್ಥೆಗಾಗಿ ನಾನಿದನ್ನು ಮಾಡಿದರೆ ತಪ್ಪೇನಿಲ್ಲ ಎನ್ನಿಸಿತು’ ಎಂದು ಹೇಳಿದ್ದಾರೆ. ಪೀಟರ್ ಭಾಟಿಯಾ ಅವರು ಜನವರಿಯಲ್ಲಿ ಅಧಿಕೃತವಾಗಿ ತಮ್ಮ ಹುದ್ದೆ ತೊರೆಯಲಿದ್ದಾರೆ.
ಪೀಟರ್ ಭಾಟಿಯಾ ಮೂಲತಃ ಉತ್ತರ ಪ್ರದೇಶದ ಲಖನೌದವರು. Gannett ಕಂಪನಿಯ ಸುದ್ದಿ ಪತ್ರಿಕೆ Detroit Free Pressದಲ್ಲಿ ದೊಡ್ಡ ಹುದ್ದೆಯಲ್ಲೇ ಇದ್ದಾರೆ. ಇತ್ತೀಚೆಗೆ ಕಂಪನಿ ಆರ್ಥಿಕ ಸಂಕಷ್ಟಕ್ಕೀಡಾದ ಹಿನ್ನೆಲೆಯಲ್ಲಿ, ಐವರು ವರದಿಗಾರರನ್ನು, ನಾಲ್ವರು ಸಹಾಯಕ ಸಂಪಾದಕರನ್ನು, ಮೂವರು ವೆಬ್ಸೈಟ್ ಪ್ರೊಡ್ಯೂಸರ್ಗಳನ್ನು, ಒಬ್ಬ ಫೋಟೋಗ್ರಾಫರ್ ಮತ್ತು ಒಬ್ಬ ಎಡಿಟೋರಿಯಲ್ ಅಸಿಸ್ಟಂಟ್ನನ್ನು ಕೆಲಸದಿಂದ ತೆಗೆಯುವುದಾಗಿ ಡಿ.12ರಂದು ಹೇಳಲಾಗಿತ್ತು. ಇಷ್ಟು ಜನರಿಗೆ ಕೊಡುವ ಸಂಬಳದ ಹಣ ಉಳಿತಾಯವಾದರೆ ತಮ್ಮ ವೆಚ್ಚ ಕಡಿಮೆ ಆಗುತ್ತದೆ ಎಂಬುದು ಕಂಪನಿಯ ಲೆಕ್ಕಾಚಾರ. ಆದರೆ ತಾನು ದೊಡ್ಡ ಹುದ್ದೆಯಲ್ಲಿದ್ದು, ದೊಡ್ಡ ಮೊತ್ತದ ವೇತನ ತೆಗೆದುಕೊಳ್ಳುತ್ತಿದ್ದೇನೆ. ನಾನು ರಾಜೀನಾಮೆ ಕೊಟ್ಟರೆ, ನನ್ನ ವೇತನದ ಹಣ ಉಳಿಯುತ್ತದೆ. ಅತ್ತ ಕೆಲಸ ಕಳೆದುಕೊಳ್ಳುವ ಸಣ್ಣ ಹುದ್ದೆ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ಭಾಟಿಯಾ ಅವರ ಲೆಕ್ಕಾಚಾರ.
ಇದನ್ನೂ ಓದಿ: Viral post | ದೇವಸ್ಥಾನದೆದುರು ಹೊಸ ಹೆಲಿಕಾಪ್ಟರ್ ತಂದು ವಾಹನ ಪೂಜೆ ಮಾಡಿಸಿದ ಉದ್ಯಮಿ!