ಇಂಡೋನೇಷ್ಯ: ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ಪಂಜರದಲ್ಲಿದ್ದ ಒರಾಂಗುಟಾನ್ ಕಪಿಯನ್ನು ಕೆಣಕಲು ಹೋದ ವ್ಯಕ್ತಿಯೊಬ್ಬನ ಅಂಗಿ ಹಾಗೂ ಕೈಕಾಲುಗಳನ್ನು ಅದು ಹಿಡಿದು ಎಳೆದಾಡಿದ ಘಟನೆ ವಿಡಿಯೋ ಆಗಿದ್ದು, ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಒರಾಂಗುಟನ್ (orangutan) ಒಬ್ಬ ವ್ಯಕ್ತಿಯ ಅಂಗಿಯನ್ನು ಆಕ್ರಮಣಕಾರಿಯಾಗಿ ಎಳೆದುಕೊಳ್ಳುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಅದನ್ನು ತಡೆಯಲು ಬಂದ ಮತ್ತೊಬ್ಬ ವ್ಯಕ್ತಿಗೂ ಬಗ್ಗದೆ ಅಂಗಿಯನ್ನು ಹಿಡಿದು ಜಗ್ಗಾಡಿದೆ. ಬಿಡಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲುಗಳನ್ನೂ ಹಿಡಿದು ಎಳೆದಾಡಿದೆ.
ಈ ವಿಡಿಯೊದಲ್ಲಿರುವ ಒರಾಂಗುಟನ್ ಹೆಸರು “ಟೀನಾ ಎನ್ಕ್ಲೋಸರ್” (Tina’s enclosure). ಯುವಕನ ಹೆಸರು ಹಸನ್ ಆರಿಫಿನ್ ಎಂದು ತಿಳಿದು ಬಂದಿದೆ. ಒರಾಂಗುಟನ್‌ಗಳನ್ನು ಅತ್ಯಂತ ವಿನಯಶೀಲ ಪ್ರಾಣಿಗಳು ಎಂದು ಹೇಳಲಾಗುತ್ತದೆ. ಮಾನವನಿಗೆ ತುಂಬಾ ಹತ್ತಿರವಾದ ಈ ಪ್ರಾಣಿಗಳು ಫ್ರೆಂಡ್ಲೀ ಸ್ವಭಾವದವು. ಆದರೆ ಅವುಗಳ ಮುಂದೆ ಕಪಿಚೇಷ್ಟೆ ಮಾಡಿದರೆ ಪಾಠ ಕಲಿಸಬಹುದು ಎಂಬುದನ್ನು ಈ ವಿಡಿಯೊ ಮನದಟ್ಟು ಮಾಡಿಕೊಟ್ಟಿದೆ.
ಈ ವಿಡಿಯೋ ಸದ್ಯ 1.2 ಕೋಟಿ ವೀಕ್ಷಣೆ ಪಡೆದಿದೆ. ಇದು ನೆಟಿಜನ್‌ಗಳಲ್ಲಿ ಕುತೂಹಲ, ವಿನೋದ, ಸಿಟ್ಟು ಎಲ್ಲವನ್ನೂ ಮೂಡಿಸಿದೆ. ಮೃಗಾಲಯದಲ್ಲಿರುವ ಪ್ರಾಣಿಗಳ ಜೀವನ ಪರಿಸ್ಥಿತಿ ಶೋಚನೀಯವಾಗಿದ್ದು, ಮನುಷ್ಯನ ಮೇಲೆ ಈ ಪ್ರಾಣಿಗಳಿಗೆ ಜಿಗುಪ್ಸೆ ಮೂಡುವಂತಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಸ್ಥಳೀಯ ಸುದ್ದಿ ವರದಿಗಳ ಪ್ರಕಾರ, ಹಸನ್ ಆರಿಫಿನ್ ಒರಾಂಗುಟಾನ್ ಇದ್ದ ಆವರಣದ ಸುತ್ತಲೂ ಅಳವಡಿಸಲಾದ ಬೇಲಿಯನ್ನು ದಾಟಿ ಹೋಗಿ ಅದರೊಂದಿಗೆ ವಿಡಿಯೊ ಮಾಡಿದ್ದಾನೆ ಎನ್ನಲಾಗಿದೆ. ಮನರಂಜನೆಗಾಗಿ ಮೃಗಾಲಯದ ಪ್ರಾಣಿಗಳಿಗೆ ಕಿರುಕುಳ ನೀಡುವ ಮನುಷ್ಯನ ಪ್ರವೃತ್ತಿಯ ಬಗ್ಗೆ ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಸೆಲ್ಫಿ ವಿಡಿಯೋ ಮಾಡ್ತಿದ್ದ ಹುಡುಗಿಯ ಸ್ಕರ್ಟ್ ಎತ್ತಿ ನೋಡಿದ ಪೋಲಿ ಕಪಿ !