ಎಲ್ಲವೂ-ಎಲ್ಲರೂ ಜತೆಗಿದ್ದಾಗಲೂ ಒಮ್ಮೊಮ್ಮೆ ಏಕಾಂಗಿ ಭಾವ (Feeling Lonely) ಕಾಡುತ್ತದೆ. ಅದು ಮನಸನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಅದರಲ್ಲೂ ಪ್ರೀತಿ/ಸಂಗಾತಿಯಯ ಹುಡುಕಾಟದಲ್ಲಿ ಇರುವವರಿಗೆ, ಸಿಕ್ಕಿದ್ದ ಪ್ರೀತಿಯನ್ನು ಕಳೆದುಕೊಂಡವರಿಗೆ ಇಂಥ ಅನಾಥಪ್ರಜ್ಞೆ ಹೆಚ್ಚು. ಪ್ರೀತಿ/ಪ್ರೇಮ/ ಪ್ರಿಯತಮ/ಪ್ರಿಯಕರ-ಇಂಥದ್ದನ್ನೆಲ್ಲ ಹಣ ಕೊಟ್ಟು ಖರೀದಿ ಮಾಡುವಂಥಿದ್ದರೆ, ಇವೆಲ್ಲ ಬಾಡಿಗೆಗೆ ಸಿಗುವುದಾಗಿದ್ದರೆ, ಅವೂ ಕೂಡ ಯಾಂತ್ರಿಕವಾಗಿದ್ದಿದ್ದರೆ ಬಹುಶಃ ಕೊರಗು ಇರುತ್ತಿರಲಿಲ್ಲವೇನೋ. ಹೀಗೊಂದು ಯೋಚನೆ ನಮ್ಮ-ನಿಮ್ಮಲ್ಲಿ ಈಗಾಗಲೇ ಒಂದು ಸಲವಾದರೂ ಬಂದಿರಬಹುದು. ಈ ಅನಿಸಿಕೆಯನ್ನು ಜಪಾನ್ ಸಾಧ್ಯವಾಗಿಸಿದೆ..!
ಅಂದರೆ ಜಪಾನ್ನಲ್ಲಿ ಬಾಡಿಗೆಗೆ ಪ್ರೀತಿಯ ಅನುಭೂತಿ ಸಿಗುತ್ತದೆ. ವಿಚಿತ್ರ ಅನ್ನಿಸುತ್ತಿದ್ದರೂ ಈಗ ಜಪಾನ್ನಲ್ಲಿ ಹೀಗೊಂದು ಟ್ರೆಂಡ್ ಶುರುವಾಗಿದೆ ಮತ್ತು ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಸಿಕ್ಕಿದೆ. ಆ ದೇಶದಲ್ಲಿ ಬಾಡಿಗೆಗೆ ಗರ್ಲ್ಫ್ರೆಂಡ್ ಸಿಗುತ್ತಾಳೆ. ಯಾರು ಬೇಕಾದರೂ ಬುಕ್ ಮಾಡಬಹುದು. ಕಾನೂನು ಬದ್ಧವಾಗಿಯೇ ಒಬ್ಬಳು ಹುಡುಗಿಯನ್ನು ಗರ್ಲ್ಫ್ರೆಂಡ್ ಆಗಿ ಬಾಡಿಗೆ ಪಡೆದು, ಬೇಕಾದಷ್ಟು ಪ್ರೀತಿಯನ್ನು ಆಕೆಯಿಂದ ಪಡೆಯಬಹುದು. ಅಲ್ಲಿ ಇದನ್ನು ಕೀಳಾಗಿ ನೋಡುವುದಿಲ್ಲ. ಇವರಿಗೇನು ಬಂತು ಇಂಥ ಕರ್ಮ ಎಂದು ಹೀಯಾಳಿಸುವುದಿಲ್ಲ. ಹಾಗೆ ಬರುವ ಗರ್ಲ್ಫ್ರೆಂಡ್ ಹಣಕ್ಕೆ ತಕ್ಕಂತೆ ಪ್ರೀತಿ (ತೋರಿಕೆ ಪ್ರೀತಿ) ಕೊಡುತ್ತಾಳೆ. ನಿಮ್ಮ ಮನಸಿನ ಏಕಾಂಗಿತನವನ್ನು ಸಾಧ್ಯವಾದಷ್ಟು ಹೋಗಲಾಡಿಸುತ್ತಾಳೆ.
ಜಪಾನ್ನಲ್ಲಿ ಹೀಗೆ ಬಾಡಿಗೆಗೆ ಗರ್ಲ್ಫ್ರೆಂಡ್ಗಳನ್ನು ಕೊಡಲು ಹಲವು ವೆಬ್ಸೈಟ್ಗಳು ರೆಡಿ ಆಗಿವೆ. ಸರ್ಕಾರದಿಂದ ಅನುಮೋದನೆ ಪಡೆದಿವೆ. ಬಾಯ್ ಫ್ರೆಂಡ್ ಸಿಗುವ ಬಗ್ಗೆ ಉಲ್ಲೇಖವಿಲ್ಲ. ಆದರೆ ಕುಟುಂಬದ ಸದಸ್ಯರನ್ನು ಬಾಡಿಗೆಗೆ ಪಡೆಯಬಹುದು. ಜಪಾನ್ನಲ್ಲಿ ವಯಸ್ಸು ಮೀರಿದರೂ ಅವಿವಾಹಿತರಾಗಿ ಉಳಿದವರಿಗೆ, ಸಂಗಾತಿಯನ್ನು ಕಳೆದುಕೊಂಡವರಿಗೆ, ವಯಸ್ಸಾದವರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಬಾಡಿಗೆಗೆ ಗರ್ಲ್ಫ್ರೆಂಡ್ ಮತ್ತು ಕುಟುಂಬ ಸದಸ್ಯರನ್ನು ಪಡೆಯುವವರು ಒಂದಷ್ಟು ಷರತ್ತುಗಳಿಗೆ ಒಳಪಡಬೇಕು. ನಿಮ್ಮ ಅಗತ್ಯಗಳನ್ನು ವೆಬ್ಸೈಟ್ನಲ್ಲಿ ಉಲ್ಲೇಖಿಸಬೇಕು. ಈ ಮೂಲಕ ನಿಮ್ಮ ಲೋನ್ಲಿನೆಸ್ನ್ನು ಹೋಗಲಾಡಿಸಿಕೊಳ್ಳಬಹುದು.
ಇದನ್ನೂ ಓದಿ: Viral News : ಮನೆ ಬಾಡಿಗೆಗೆ ಕೊಡುವುದರೊಂದಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಓನರ್! ವೈರಲ್ ಆಗ್ತಿದೆ ಕಿಮ್ಚಿ ಕಥೆ
ಜಪಾನ್ ಟುಡೆ ಮಾಧ್ಯಮದ ಪ್ರಕಾರ ಒಂದು ಹುಡುಗಿಯನ್ನು ಗರ್ಲ್ಫ್ರೆಂಡ್ ಆಗಿ ಬಾಡಿಗೆಗೆ ಪಡೆದರೆ, ತಾಸಿಗೆ 6000 ಯೆನ್ (3000 ರೂ.)ನಂತೆ ಹಣ ಕೊಡಬೇಕು. ಅಂದರೆ ಎರಡು ತಾಸಿಎ 12000ಯೆನ್ ಆಗುತ್ತದೆ. ಹೀಗೆ ಬಾಡಿಗೆ ಗರ್ಲ್ಫ್ರೆಂಡ್ ಕೆಲಸ ಮಾಡುತ್ತಿರುವ ಶಿಹೊ ಎಂಬುವಳ ಪ್ರಕಾರ ‘ಬಾಡಿಗೆಗೆ ಗರ್ಲ್ಫ್ರೆಂಡ್ ಬೇಕು ಎಂದು ಬರುವ ಪುರುಷರಲ್ಲಿ ಹೆಚ್ಚಿನ ಜನರು ಇದುವರೆಗೂ ಒಬ್ಬಳೇ ಒಬ್ಬ ಹುಡುಗಿಯ ಜತೆಗೂ ಡೇಟಿಂಗ್ ಮಾಡದೆ ಇರುವವರೇ ಆಗಿದ್ದಾರೆ. ಬಹುಪಾಲು ಮಂದಿ ಸಂಗಾತಿಗಾಗಿ ಹುಡುಕುತ್ತಿರುವವರು’ ಎಂದು ತಿಳಿಸಿದ್ದಾರೆ. ನೀವೇನಾದ್ರೂ ಜಪಾನ್ ಪ್ಲ್ಯಾನ್ ಹಾಕಿದ್ದರೆ, ಇಲ್ಲಿಂದ ಅಲ್ಲಿವರೆಗೆ ಒಬ್ಬರೇ ಹೋಗಿ. ಇಡೀ ಜಪಾನ್ನ್ನು ಬಾಡಿಗೆ ಗರ್ಲ್ಫ್ರೆಂಡ್ ಜತೆ ಸುತ್ತಬಹುದು ನೋಡಿ..!