Site icon Vistara News

Pakistan Economy Collapse | ಪ್ಲಾಸ್ಟಿಕ್‌ನಲ್ಲಿ ಅಡುಗೆ ಅನಿಲ ತುಂಬಿಸಿ ಹೊತ್ತೊಯ್ಯುವ ದುಸ್ಥಿತಿ, ದಿವಾಳಿಯತ್ತ ಪಾಕಿಸ್ತಾನ

Pakistan Economy Crisis

ಇಸ್ಲಾಮಾಬಾದ್:‌ ಉಗ್ರರಿಗೆ ಹಣಕಾಸು ನೆರವು, ಕೊರೊನಾ ಬಿಕ್ಕಟ್ಟು, ಸಮರ್ಥ ನಾಯಕತ್ವದ ಕೊರತೆ, ರಷ್ಯಾ-ಉಕ್ರೇನ್‌ ಯುದ್ಧ ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನದ ಆರ್ಥಿಕತೆ ದಿವಾಳಿಯ (Pakistan Economy Collapse) ಅಂಚಿಗೆ ಬಂದುನಿಂತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರಿಗೆ ಅಡುಗೆ ಅನಿಲ ಪೂರೈಕೆ ಸೇರಿ ಹಲವು ಕೊರತೆಯುಂಟಾಗಿದೆ. ಅದರಲ್ಲೂ, ಅಡುಗೆ ಅನಿಲ ಸಿಲಿಂಡರ್‌ ಸಿಗದ ಕಾರಣದಿಂದಾಗಿ ಜನ ಪ್ಲಾಸ್ಟಿಕ್‌ ಬ್ಯಾಗ್‌ ಹಾಗೂ ಬಲೂನ್‌ಗಳಲ್ಲಿ ಅಡುಗೆ ಅನಿಲ ತುಂಬಿಸಿಕೊಂಡು ಮನೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಹೀಗೆ, ಪ್ಲಾಸ್ಟಿಕ್‌ ಬಲೂನ್‌ಗಳಲ್ಲಿ ಅಡುಗೆ ಅನಿಲ ತುಂಬಿಸಿಕೊಂಡು ಹೋಗುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಪಾಕಿಸ್ತಾನದ ಖೈಬರ್‌ ಪಖ್ತುಂಖ್ವ (Khyber Pakhtunkhwa) ಪ್ರಾಂತ್ಯದಲ್ಲಿ ಜನರಿಗೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಾಗುತ್ತಿಲ್ಲ. ಅಡುಗೆ ಅನಿಲ ಸಿಲಿಂಡರ್‌ ಬೆಲೆಯೇರಿಕೆ ಜತೆಗೆ ಪೂರೈಕೆಯ ಕೊರತೆಯಿಂದಾಗಿ ಜನ ಒಂದು ಹೊತ್ತು ಅಡುಗೆ ಮಾಡಲು ಕೂಡ ಪರದಾಡುವಂತಾಗಿದೆ. ಹಾಗಾಗಿ, ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ, ಬಲೂನ್‌ಗಳಲ್ಲಿ ಅಡುಗೆ ಅನಿಲವನ್ನು ತುಂಬಿಸಿಕೊಂಡುವ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ಹೀಗೆ ಬಲೂನ್‌ಗಳಲ್ಲಿ ಗ್ಯಾಸ್‌ ತುಂಬಿಸಿಕೊಂಡು ಹೋಗುವುದು ಅಪಾಯಕಾರಿ ಎಂದೂ ಹೇಳಲಾಗುತ್ತಿದೆ.

ಬ್ಯಾಗ್‌ನಲ್ಲಿ ಗ್ಯಾಸ್‌ ತುಂಬಲು ಹೇಗೆ ಸಾಧ್ಯ?
ಪ್ಲಾಸ್ಟಿಗ್‌ ಬ್ಯಾಗ್‌ ಹಾಗೂ ಬಲೂನ್‌ಗಳಲ್ಲಿ ಅಡುಗೆ ಅನಿಲ ತುಂಬುವುದು ಹೇಗೆ ಸಾಧ್ಯ? ಇದು ಅಪಾಯಕಾರಿಯಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ. ಆದರೆ, ಹೊಟ್ಟೆಪಾಡಿಗಾಗಿ ಪಾಕಿಸ್ತಾನದ ಜನ ಉಪಾಯ ಕಂಡುಕೊಂಡಿದ್ದಾರೆ. ಕಾಂಪ್ರೆಸ್ಸರ್‌ನ ಸಹಾಯದಿಂದ ಗ್ಯಾಸ್‌ ಏಜೆನ್ಸಿಗಳಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೆ ಅಡುಗೆ ಅನಿಲ ತುಂಬಲಾಗುತ್ತಿದೆ. ಒಂದು ಪ್ಲಾಸ್ಟಿಕ್‌ ಬ್ಯಾಗ್‌ಗೆ 4 ಕೆ.ಜಿ ಗ್ಯಾಸ್‌ ತುಂಬಲು ಮೂರು ಗಂಟೆ ಬೇಕಾಗುತ್ತಿದೆ. ಹೀಗಿದ್ದರೂ, ಜನ ಕಾದು ಗ್ಯಾಸ್‌ ತುಂಬಿಸಿಕೊಂಡು ಹೋಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಶ್ರೀಲಂಕಾದಲ್ಲಿ ಉಂಟಾದ ಅರಾಜಕತೆ ಇಲ್ಲೂ ಉಂಟಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Pakistan Hindu | ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆ ಕೈಗೊಳ್ಳಿ: ಪಾಕಿಸ್ತಾನಕ್ಕೆ ಭಾರತ ತಾಕೀತು

Exit mobile version