ಅಥೆನ್ಸ್: ಗ್ರೀಸ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರಿದ್ದ ಹಡಗು ಮುಳುಗಿ (Greece Vessel Sinks) ಸುಮಾರು 79 ಜನ ಜಲಸಮಾಧಿಯಾಗಿದ್ದಾರೆ. ಗ್ರೀಸ್ ಕರಾವಳಿಯಿಂದ ಜೂನ್ 14ರಂದು ಯುರೋಪ್‌ನತ್ತ ಹೊರಟ ಹಡಗಿನಲ್ಲಿ ನೂರಾರು ವಲಸೆಗಾರರು ಪ್ರಯಾಣಿಸುತ್ತಿದ್ದರು. ಮೀನುಗಾರಿಕೆ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿದ್ದೇ ಹಡಗು ಮುಳುಗಲು ಕಾರಣ ಎಂದು ತಿಳಿದುಬಂದಿದೆ.
ಗ್ರೀಸ್ ಮೀನುಗಾರಿಕೆ ಹಡಗು ದುರಂತವು ಪ್ರಸಕ್ತ ವರ್ಷದಲ್ಲಿ ನಡೆದ ಮಹಾನ್ ದುರಂತ ಎಂದೇ ಹೇಳಲಾಗುತ್ತಿದೆ. ಸಮುದ್ರದಲ್ಲಿ ಮುಳುಗಿದ್ದ 150ಕ್ಕೂ ಅಧಿಕ ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಆದರೂ, ಇನ್ನೂ ಹತ್ತಾರು ಜನ ನೀರಿನಲ್ಲಿಯೇ ಮುಳುಗಿದ್ದಾರೆ. ಅವರು ಮೃತಪಟ್ಟಿರುವ ಸಾಧ್ಯತೆ ಹೆಚ್ಚಿದ್ದು, ಆದರೂ ಶವಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಬುಧವಾರ ರಾತ್ರಿ ದುರಂತ ಸಂಭವಿಸಿದ್ದು, ಕೂಡಲೇ ಕರಾವಳಿ ರಕ್ಷಣಾ ಪಡೆ, ನೌಕಾಪಡೆ ಅಧಿಕಾರಿಗಳು ದುರಂತ ನಡೆದ ಸ್ಥಳಕ್ಕೆ ತೆರಳಿದ್ದಾರೆ. ರಾತ್ರೋರಾತ್ರಿ ನೂರಾರು ಜನರನ್ನು ರಕ್ಷಿಸಲಾದರೂ, ಕಣ್ಮರೆಯಾದವರ ಸಂಖ್ಯೆ ಹೆಚ್ಚಿದೆ ಎಂದೇ ಹೇಳಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನ, ಸಂಬಂಧಿಕರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ.
ರಾಷ್ಟ್ರೀಯ ಶೋಕಾಚರಣೆ ಘೋಷಣೆ
ಹಡಗು ಮುಳುಗಿ, 79 ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಗ್ರೀಸ್ ಪ್ರಧಾನಿ ಇಯಾನ್ನಿಸ್ ಸರ್ಮಾಸ್ ಅವರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ, ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಣೆ ಮಾಡಿದ್ದಾರೆ. “ಹಡಗು ದುರಂತದಲ್ಲಿ ನೀರುಪಾಲಾದ ವಲಸೆಗಾರರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಹೇಳಿದ್ದಾರೆ.
ಗ್ರೀಸ್‌ನಲ್ಲಿ ಅಕ್ರಮವಾಗಿ ವಲಸೆ ಹೋಗುವವರ ಸಂಖ್ಯೆ ಹೆಚ್ಚಿದ್ದು, ಮೀನುಗಾರಿಕೆ ಹಡಗುಗಳಲ್ಲಿ ಜನ ಯುರೋಪ್‌ಗೆ ತೆರಳುತ್ತಾರೆ. ಹಣದ ಆಸೆಗೆ ಹಡಗಿನ ಸಿಬ್ಬಂದಿಯು ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕಾರಣ ಇಂತಹ ದುರಂತಗಳು ಆಗಾಗ ಸಂಭವಿಸುತ್ತವೆ ಎಂದು ಮೂಲಗಳಿಂದ ತಿಳಿದುಬಂದಿದೆ.