ಇಸ್ಲಾಮಾಬಾದ್: ಸಾಮಾನ್ಯವಾಗಿ ಪಾಕಿಸ್ತಾನದ ಪ್ರಧಾನಿಗಳು ಎಂದರೆ, ಅಧಿಕಾರದಲ್ಲಿದ್ದಾಗ ಚೆನ್ನಾಗಿ ದುಡ್ಡು ಮಾಡುವವರು, ಅಧಿಕಾರ ಕಳೆದುಕೊಂಡ ಮೇಲೆ ವಿದೇಶದಲ್ಲಿ ನೆಲೆಸಿ ಐಷಾರಾಮಿ ಜೀವನ ಸಾಗಿಸುವವರು ಎಂಬ ಮಾತಿದೆ. ಆದರೆ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಜೀವನ ಸಾಗಿಸಲೂ ದುಡ್ಡಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆಯಾ? ಇಮ್ರಾನ್ ಖಾನ್ ಪತ್ನಿಯು (Imran Khan Wife) ದೂರವಾಣಿಯಲ್ಲಿ ಮಾತನಾಡಿದ ಆಡಿಯೊ ಕೇಳಿದ ಮೇಲೆ ಇಂಥದ್ದೊಂದು ಪ್ರಶ್ನೆ ಮೂಡುತ್ತದೆ.
ಇಮ್ರಾನ್ ಖಾನ್ ಪತ್ನಿ ಬುರ್ಶಾ ಬೀಬಿ ಅವರು ದೂರವಾಣಿಯಲ್ಲಿ ಮಾತನಾಡಿದ್ದು, ಇಮ್ರಾನ್ ಖಾನ್ ಅವರ ಬಳಿ ಇರುವ ದುಬಾರಿ ವಾಚ್‌ಗಳನ್ನು ಮಾರಾಟ ಮಾಡುವಂತೆ ಕೋರಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಹಿರಿಯ ಅಧಿಕಾರಿ ಜುಲ್ಫಿ ಬುಖಾರಿ ಜತೆ ದೂರವಾಣಿಯಲ್ಲಿ ೨೧ ಸೆಕೆಂಡ್ ನಡೆಸಿದ ಮಾತುಕತೆಯ ಆಡಿಯೊ ಈಗ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ಇದು ವಿವಾದಕ್ಕೂ ಕಾರಣವಾಗಿದೆ.
“ಇಮ್ರಾನ್ ಖಾನ್ ಸಾಹೇಬರ ಬಳಿ ಹಲವು ದುಬಾರಿ ಗಡಿಯಾರಗಳಿವೆ. ಅವುಗಳನ್ನು ಅವರು ಹಾಕಿಕೊಳ್ಳುತ್ತಿಲ್ಲ. ಹಾಗಾಗಿ, ವಾಚ್‌ಗಳನ್ನು ನಿಮಗೆ ಕಳುಹಿಸಬೇಕಂತೆ. ನೀವು ಅವುಗಳನ್ನು ಮಾರಾಟ ಮಾಡಬೇಕು” ಎಂದು ಬುರ್ಶಾ ಬೀಬಿ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜುಲ್ಫಿ, “ಖಂಡಿತವಾಗಿಯೂ ಮಾರಾಟ ಮಾಡುತ್ತೇನೆ” ಎಂದು ಹೇಳಿದ್ದಾರೆ. ಇಮ್ರಾನ್ ಖಾನ್ ಅವರು ಬೇರೆ ದೇಶಗಳಿಗೆ ತೆರಳಿದಾಗ ಕೋಟ್ಯಂತರ ರೂ. ಬೆಲೆಬಾಳುವ ಉಡುಗೊರೆಗಳನ್ನು ಪಡೆದಿದ್ದು, ಇವುಗಳಲ್ಲಿ ದುಬಾರಿ ವಾಚ್‌ಗಳು ಕೂಡ ಇವೆ ಎಂದು ತಿಳಿದುಬಂದಿದೆ. ಕ್ರಿಕೆಟ್ ಆಡುವಾಗ ದೊರಕಿದ ಚಿನ್ನದ ಪದಕವನ್ನೂ ಮಾರಾಟ ಮಾಡಿದ್ದಾರೆ ಎಂಬ ಆರೋಪವೂ ಇಮ್ರಾನ್ ಖಾನ್ ಮೇಲಿದೆ.
ಇದನ್ನೂ ಓದಿ | Imran Khan | ತಮಗೆ ಸಿಕ್ಕ ಚಿನ್ನದ ಪದಕ ಮಾರಾಟ ಮಾಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್