Site icon Vistara News

ಸದಾ ನಗುತ್ತಿರುವಂತೆ ಕಾಣುವ ಈ ಮಗು ಇಂಟರ್‌ನೆಟ್‌ ಸ್ಟಾರ್‌; ಅಪರೂಪದ ಕಾಯಿಲೆಗೆ ಹೆದರಿದ ಪಾಲಕರು

permanent smile Baby

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಶಿಶುವೊಂದರ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಮಗು ಹುಟ್ಟಿದ ತಕ್ಷಣ ವೈದ್ಯರೇ ಶಾಕ್‌ ಆಗಿದ್ದರಂತೆ. ಒಂದು ಸಣ್ಣ ಮತ್ತು ಅಪರೂಪದ ಆನುವಂಶಿಕ ಸಮಸ್ಯೆಯಿಂದಾಗಿ ಮಗುವೀಗ ಇಂಟರ್‌ನೆಟ್‌ ಸೆನ್ಸೇಷನ್‌ ಆಗಿದೆ. ಮಗುವಿನ ಹೆಸರು ಆಯ್ಲಾ ಸಮ್ಮರ್ ಮುಚಾ. ಇವಳು ಬೈಲೆಟರಲ್‌ ಮ್ಯಾಕ್ರೋಸ್ಟೊಮಿಯಾ ಎಂಬ ಅತ್ಯಂತ ಅಪರೂಪದ ಸ್ಥಿತಿಯಿಂದ ಹುಟ್ಟಿದ್ದಾಳೆ. ಇದರಿಂದಾಗಿ ಆಕೆಯ ಬಾಯಿಯ ಎರಡೂ ಬದಿಯ ಮೂಲೆಗಳು ಒಂದಕ್ಕೊಂದು ಬೆಸೆದುಕೊಂಡಿಲ್ಲ. ಪುಟ್ಟ ಪಾಪು ಸದಾ ನಗುತ್ತಿರುವಂತೆ (Permanent Smile Condition) ಭಾಸವಾಗುತ್ತಿದೆ. ಹೀಗಾಗಿ ಶಾಶ್ವತ ನಗುವಿನೊಂದಿಗೆ ಹುಟ್ಟಿದ ಬೇಬಿ ಎಂದೇ ಇಂಟರ್‌ನೆಟ್‌ನಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾಳೆ.

ಹೆಣ್ಣು ಮಗು ಹುಟ್ಟಿದ್ದು 2021ರ ಡಿಸೆಂಬರ್‌ನಲ್ಲಿ. ಕ್ರಿಸ್ಟಿನಾ ವರ್ಚರ್(21) ಮತ್ತು ಬ್ಲೇಜ್ ಮುಚಾ (20) ದಂಪತಿಯ ಮಗಳು. ಆದರೆ ತಮ್ಮ ಮಗುವಿನ ಈ ಸ್ಥಿತಿ ನೋಡಿ ಪಾಲಕರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಮಗು ಆಯ್ಲಾ, ತಾಯಿಯ ಹೊಟ್ಟೆಯಲ್ಲಿ ಬೆಳೆಯುವಾಗಲೇ ಹೀಗೆ ಬೆಳೆದಿದೆ. ಗರ್ಭಿಣಿಯಾದಾಗಿನಿಂದ ಹೆರಿಗೆಯಾಗುವವರೆಗೂ ವಿವಿಧ ಹಂತದಲ್ಲಿ ಕ್ರಿಸ್ಟಿನಾ ವರ್ಚರ್‌ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ. ಆದರೆ ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ಕೂಡ ಒಮ್ಮೆಯೂ ಗೊತ್ತಾಗಲಿಲ್ಲ. ಮಗುವನ್ನು ಸಿಸೇರಿಯನ್‌ ಮೂಲಕ ಹೊರತೆಗೆದಾಗಲೇ ಬಾಯಿ ಅಸಹಜವಾಗಿರುವುದ ಗೊತ್ತಾಯಿತು ಎನ್ನುತ್ತಾರೆ ಮಗುವಿನ ತಂದೆ ಬ್ಲೇಜ್‌ ಮುಚಾ.

ಮಗುವಿನ ಫೋಟೋ, ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ತುಂಬ ಫೇಮಸ್‌ ಆಗಿದ್ದರೂ, ನೆಟ್ಟಿಗರು ಅದನ್ನು ಮೆಚ್ಚಿಕೊಂಡಿದ್ದರೂ ಕೂಡ ಆಕೆಯನ್ನು ಹಾಗೇ ಬಿಡುವಂತಿಲ್ಲ. ಆಯ್ಲಾಗೆ ಸರ್ಜರಿ ಮಾಡುವ ಮೂಲಕ ಬಾಯಿಯನ್ನು ಸರಿಪಡಿಸುವಂತೆ ಆಕೆಯ ಪಾಲಕರೇ ವೈದ್ಯರ ಬಳಿ ಹೇಳಿದ್ದಾರೆ. ಆಯ್ಲಾಳಿಗೆ ಈಗ ಬಾಯಿಯನ್ನು ಸರಿಯಾಗಿ ಮುಚ್ಚಲು ಸಾಧ್ಯವಾಗುತ್ತಿಲ್ಲ ಮತ್ತು ಎದೆಹಾಲು ಕುಡಿಯಲೂ ಸಾಧ್ಯವಾಗುತ್ತಿಲ್ಲ. ಮುಂದೆ ಇನ್ನಷ್ಟು ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಅದನ್ನು ಸರ್ಜರಿ ಮಾಡಿಸುವ ನಿರ್ಧಾರಕ್ಕೆ ಪಾಲಕರು ಬಂದಿದ್ದಾರೆ.

ಇದನ್ನೂ ಓದಿ: Viral video: ತಂದೆ ತಂದೆಯೇ, ಮಗ ಮಗನೇ! ಶಿಖರ್‌ ಧವನ್‌ಗೆ ಅಪ್ಪನ ಒದೆ!!

ಈಕೆಗಿರುವ ಕಾಯಿಲೆ ಅತ್ಯಪರೂಪವಾಗಿದೆ. ಹಾಗಾಗಿ ಚಿಕಿತ್ಸಾ ಹಂತದಲ್ಲಿ ಕೆಲವು ಸವಾಲುಗಳು ಎದುರಾಗಬಹುದ 2007ರಲ್ಲಿ left Palate-Craniofacial ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಬೈಲೆಟರಲ್‌ ಮ್ಯಾಕ್ರೋಸ್ಟೊಮಿಯಾ ಕೇಸ್‌ಗಳು ಕೇವಲ 14. ಅದರಲ್ಲೂ ಈಗ ಆಯ್ಲಾ ಹುಟ್ಟಿದ ಆಸ್ಪತ್ರೆಯಲ್ಲಿ ಇದೇ ಮೊದಲ ಪ್ರಕರಣವಾಗಿದೆ. ಹಾಗಾಗಿ ಚಿಕಿತ್ಸೆಗೂ ಪೂರ್ವ ವೈದ್ಯರಿಗೆ ಅಧ್ಯಯನ ಅಗತ್ಯ ಎಂದು ನ್ಯೂಯಾರ್ಕ್‌ ಪೋಸ್ಟ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಏನಿದು ಮ್ಯಾಕ್ರೋಸ್ಟೊಮಿಯಾ?
ಮ್ಯಾಕ್ರೋಸ್ಟೊಮಿಯಾ ಕೂಡ ಒಂದು ದೈಹಿಕ ಅಸಹಜತೆಯಾಗಿದ್ದು, ಇದು ಮುಖದ ಭಾಗದಲ್ಲಿ ಸೀಳು ರಚನೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಈ ಸೀಳು ವ್ಯಕ್ತಿಯ ಬಲ ಕೆನ್ನೆಯಲ್ಲಿ ಕಂಡುಬರುತ್ತವೆ. ಆದರೆ ಆಯ್ಲಾಳಿಗೆ ಎರಡೂ ಕಡೆಗಳಲ್ಲಿ ಕಾಣಿಸಿಕೊಂಡಿದೆ. 1,50,000-3,00,000 ಜನರಲ್ಲಿ ಒಬ್ಬರಲ್ಲಿ ಇದು ಕಾಣಿಸಿಕೊಳ್ಳಬಹುದು. ಇದನ್ನು ಸರ್ಜರಿ ಮೂಲಕ ಸರಿಪಡಿಸಬಹುದಾದರೂ ಅದಕ್ಕೆ ನುರಿತ ತಜ್ಞರ ಅಗತ್ಯವಿದೆ.

ಇದನ್ನೂ ಓದಿ: Video: ʼಮಮ್ಮೀ ಬಾʼ ಎಂದು ಮುದ್ದಾಗಿ ಕೂಗುವ ಕೆಂಪು ಗಿಳಿ; ವಿಡಿಯೋ ನೋಡಿ ನೆಟ್ಟಿಗರು ಖುಷ್‌

Exit mobile version