Site icon Vistara News

Taliban Rule | ಅಫಘಾನಿಸ್ತಾನದಲ್ಲಿ ಅಳುವ ಮಕ್ಕಳಿಗೆ ನಿದ್ರೆ ಮಾತ್ರೆ, ಆಹಾರಕ್ಕಾಗಿ ಕಿಡ್ನಿ-ಹೆಣ್ಣು ಮಕ್ಕಳ ಮಾರಾಟ!

Taliban Rule @ Aftghanistan

ಕಾಬೂಲ್: ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು (Taliban Rule) ಜಾರಿಯಾಗಿ ಎರಡು ವರ್ಷಗಳಾಯಿತು. ಆದರೆ, ಅಲ್ಲಿನ ಜನಜೀವನ ಪರಿಸ್ಥಿತಿ ಸುಧಾರಿಸಿದೆಯೇ? ಖಂಡಿತ ಇಲ್ಲ. ಅಲ್ಲಿನ ಮಕ್ಕಳು ಹಸಿವಿನಿಂದ ಸಾಯುತ್ತಿವೆ, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ, ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ, ಅಂಗಾಂಗ ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಇದೆ!

”ಮಕ್ಕಳು ಹಸಿವಿನಿಂದ ಅಳುತ್ತಾರೆ, ಅವರಿಗೆ ಮಲಗಲು ಸಾಧ್ಯವಾಗುವುದಿಲ್ಲ. ಆಗ ನಾವು ಅವರಿಗೆ ಟ್ಯಾಬ್ಲೆಟ್ ನೀಡುತ್ತೇವೆ. ಅದರಿಂದಾಗಿ ಅವರು ನಿದ್ದೆಗೆ ಜಾರುತ್ತಾರೆ,” ಎನ್ನುತ್ತಾರೆ ಅಫಘಾನಿಸ್ತಾನದ ಮೂರನೇ ಅತಿದೊಡ್ಡ ನಗರ ಎನಿಸಿರುವ ಹೆರಾತ್‌ನ ನಿವಾಸಿ. ಈ ನಗರದ ತುಂಬ ಯುದ್ಧದ ಸಂತ್ರಸ್ತರೇ ತುಂಬಿದ್ದಾರೆ. ಮತ್ತೊಬ್ಬ ವ್ಯಕ್ತಿಯು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖಿನ್ನತೆ ಕಾಯಿಲೆಗೆ ನೀಡಲಾಗುವ alprazolam – tranquilisers ಮಾತ್ರೆಗಳನ್ನು ಮಕ್ಕಳಿಗೆ ನೀಡುತ್ತೇವೆ. ಐದಾರು ಈ ಮಾತ್ರೆಗಳ ಮೌಲ್ಯ ಮತ್ತು ಒಂದು ಬ್ರೆಡ್ ಮೌಲ್ಯ ಎರಡೂ ಸಮವಾಗಿದೆ! ಊಟಕ್ಕೆ ಅನ್ನ ಇಲ್ಲದ್ದಕ್ಕೆ ಮಕ್ಕಳಿಗೆ ಈ ಮಾತ್ರೆ ನೀಡಿ ಮಲಗಿಸುತ್ತೇವೆ ಎನ್ನುತ್ತಾರೆ ಅವರು.

ತಾಲಿಬಾನ್ ಅಫಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಇದುವರೆಗೆ ಯಾವುದೇ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿಲ್ಲ. ಯಾವ ರಾಷ್ಟ್ರಗಳೂ ಈ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವ ಪ್ರಯತ್ನ ಮಾಡಿಲ್ಲ. ಹಾಗಾಗಿ, ಬೇರೆ ಬೇರೆ ದೇಶಗಳಿಂದ ನೆರವು ಕೂಡ ಸಿಗುತ್ತಿಲ್ಲ. ಯಾವುದೇ ರಾಷ್ಟ್ರಗಳು ಹಣಕಾಸು ನೆರವು ಕೂಡ ನೀಡುವಂತೆಯೂ ಇಲ್ಲ.

ಕಿಡ್ನಿ ಮಾರಾಟ
ಇನ್ನು ಕೆಲವರು ತಮ್ಮ ದೇಹದ ಅಂಗಾಂಗಳನ್ನು ಮಾರಾಟ ಮಾಡುವ ಹಂತಕ್ಕೂ ತಲುಪಿದ್ದಾರೆ. ಕಿಡ್ನಿ ಮಾರಾಟದಿಂದ ಬಂದ ಹಣದಿಂದ ಆಹಾರ ಖರೀದಿಗಾಗಿ ಮಾಡಿದ ಸಾಲವನ್ನು ಮರು ಪಾವತಿಸಿದ್ದಾರೆ. ಈ ಬಗ್ಗೆ ಆಫ್ಘನ್ ವ್ಯಕ್ತಿಯೊಬ್ಬ ಮಾಹಿತಿ ನೀಡಿದ್ದು, ”ಕಿಡ್ನಿ ಮಾರಾಟ ಮಾಡಬಹುದು ಎಂದು ಕೇಳಿದ್ದೆ. ಸ್ಥಳೀಯ ಆಸ್ಪತ್ರೆಗೆ ಹೋಗಿ ಕಿಡ್ನಿ ಮಾರಾಟ ಮಾಡಬೇಕು ಎಂದು ಕೇಳಿದೆ. ಕೆಲವು ವಾರದ ಬಳಿಕ ಅವರು ನನಗೆ ಕರೆ ಮಾಡಿ, ಆಸ್ಪತ್ರೆಗೆ ಕರೆದರು. ಈಗ ಕಿಡ್ನಿ ಮಾರಾಟ ಮಾಡಿ ಮೂರು ತಿಂಗಳಾಗಿದೆ,” ಎನ್ನುತ್ತಾರೆ ಅವರು. ಕಿಡ್ನಿ ಮಾರಾಟದಿಂದ ಆತನಿಗೆ ಸುಮಾರು 270, 000 ಆಫ್ಘಾನಿಸ್ ದೊರೆತಿದೆ. ಅಂದರೆ, ಸುಮಾರು 3,100 ಅಮೆರಿಕನ್ ಡಾಲರ್.

”ನಾವು ಒಂದು ರಾತ್ರಿ ಊಟ ಮಾಡಿದರೆ ಮತ್ತೊಂದು ರಾತ್ರಿ ಊಟ ಇರುವುದಿಲ್ಲ. ಕಿಡ್ನಿ ಮಾರಾಟ ಮಾಡಿದ ಬಳಿಕ ನಾನು ಅರ್ಧ ಮನುಷ್ಯ ಎನಿಸುತ್ತಿದೆ. ಇದು ಇದೇ ರೀತಿ ಮುಂದುವರಿದರೆ ಖಂಡಿತ ಸತ್ತೇ ಹೋಗುತ್ತೇನೆ,” ಎನ್ನಾತ್ತಾರೆ ಅವರು.

ಹೆಣ್ಣು ಮಕ್ಕಳ ಮಾರಾಟ
ನಿಜಾಮುದ್ದೀನ್ ಎಂಬಾತ ತನ್ನ 5 ವರ್ಷದ ಹೆಣ್ಣು ಮಗಳನ್ನು ಕೇವಲ ಒಂದು ಲಕ್ಷ ಆಫ್ಘನಿಸ್‌ಗೆ ಮಾರಾಟ ಮಾಡಿದ ಕತೆ ಹೃದಯವಿದ್ರಾವಕವಾಗಿದೆ. ಕಿಡ್ನಿ ಬೆಲೆಗಿಂತಲೂ ಹೆಣ್ಣು ಮಗುವಿನ ಬೆಲೆ ಅರ್ಧದಷ್ಟು ಕಡಿಮೆ! ತನ್ನ ಐದು ವರ್ಷದ ಹೆಣ್ಣು ಮಗಳನ್ನು ಈತ ಅಫಘಾನಿಸ್ತಾನದ ದಕ್ಷಿಣ ಪ್ರಾಂತ್ಯದ ಕಂದಹಾರದ ಕುಟುಂಬಕ್ಕೆ ಮಾರಾಟ ಮಾಡಿದ್ದಾನೆ. ಎರಡು ಕಂತುಗಳಲ್ಲಿ ಈತನಿಗೆ ಹಣ ಪಾವತಿಸಲಾಗಿದೆ. ಹೀಗೆ ಬಂದ ಹಣದ ಪೈಕಿ ಹೆಚ್ಚಿನ ಮೊತ್ತವನ್ನು ಆತ ಆಹಾರ ಖರೀದಿಸಲು ಮತ್ತು ಮತ್ತೊಬ್ಬ ಮಗುವಿನ ಔಷಧಕ್ಕಾಗಿಯೇ ವೆಚ್ಚ ಮಾಡಿ ಮಾಡಿದ್ದಾನೆ.

ಇದನ್ನೂ ಓದಿ | Taliban Rule | ತಾಲಿಬಾನ್‌ ಕಪಿಮುಷ್ಟಿಗೆ ಸಿಲುಕಿ ಆಫ್ಘನ್‌ಗೆ ಒಂದು ವರ್ಷ, ಏನೆಲ್ಲ ನಡೆದುಹೋಯ್ತು?

Exit mobile version