Site icon Vistara News

Bangla Agitation Explainer: ಬಾಂಗ್ಲಾದೇಶ ಏಕೆ ಹೊತ್ತಿ ಉರಿಯುತ್ತಿದೆ? ವಿದ್ಯಾರ್ಥಿಗಳು ಏಕೆ ಹಿಂಸಾಚಾರಕ್ಕಿಳಿದಿದ್ದಾರೆ?

Bangla Agitation Explainer

1971ರಲ್ಲಿ ನಡೆದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ (Bangla Agitation Explainer) ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.30 ಮೀಸಲಾತಿ (Job Reservation) ವ್ಯವಸ್ಥೆಯನ್ನು ವಿರೋಧಿಸಿ ಬಾಂಗ್ಲಾದೇಶದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆಗೆ (Bangladesh Violence) ಇಳಿದಿದ್ದಾರೆ. ಪ್ರತಿಭಟನೆಯು ಹಿಂಸೆಯ ರೂಪ ತಳೆದು 40 ಮಂದಿ ಸಾವನ್ನಪ್ಪಿದ್ದು, 2,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೆಚ್ಚುತ್ತಿರುವ ಘರ್ಷಣೆಯನ್ನು ಶಾಂತಗೊಳಿಸಲು ಪ್ರಧಾನಿ ಶೇಖ್ ಹಸೀನಾ (PM Sheikh Hasina ) ಅವರು ಮಾಧ್ಯಮದಲ್ಲಿ ಕಾಣಿಸಿಕೊಂಡ ಬಳಿಕ ಪ್ರತಿಭಟನಾಕಾರರು ಪ್ರಮುಖ ಟಿವಿ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಹಲವು ವಾರಗಳಿಂದ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯು ಉಗ್ರ ಸ್ವರೂಪ ಪಡೆಯಲು ಹಲವು ಕಾರಣಗಳಿವೆ.

ಪ್ರತಿಭಟನೆ ಯಾವಾಗ ಪ್ರಾರಂಭ?

1971ರಲ್ಲಿ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರು ಮತ್ತು ಹೋರಾಟಗಾರರ ಸಂಬಂಧಿಕರಿಗೆ ಉದ್ಯೋಗಗಳಲ್ಲಿ ಶೇ.30ರಷ್ಟು ಮೀಸಲಾತಿ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ರಾಜಧಾನಿ ಢಾಕಾ ಮತ್ತು ಇತರ ನಗರಗಳಲ್ಲಿ ನೂರಾರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ತಿಂಗಳಿನಿಂದ ರ‍್ಯಾಲಿಗಳನ್ನು ಪ್ರಾರಂಭಿಸಿದರು. ಶಾಂತವಾಗಿಯೇ ನಡೆಯುತ್ತಿದ್ದ ಪ್ರತಿಭಟನೆಕಾರರ ಮೇಲೆ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತರೂಢ ಅವಾಮಿ ಲೀಗ್‌ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದರು. ಆ ಬಳಿಕ ಪ್ರತಿಭಟನೆ ಹಿಂಸೆಯ ರೂಪ ತಾಳಿತು.


ಪ್ರತಿಭಟನೆಗೆ ಕಾರಣ?

1971ರ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯದ ಯುದ್ಧದಲ್ಲಿ ಹೋರಾಡಿದವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30 ಮೀಸಲಾತಿ ವ್ಯವಸ್ಥೆಯನ್ನು ಬಾಂಗ್ಲಾದೇಶದ ಹೈಕೋರ್ಟ್‌ ಕಳೆದ ಜೂನ್ 5ರಂದು ಮತ್ತೆ ಜಾರಿಗೆ ತಂದ ಬಳಿಕ ಪ್ರತಿಭಟನೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೇತೃತ್ವದ ಬೃಹತ್ ಹೋರಾಟದ ಬಳಿಕ 2018ರಲ್ಲಿ ಈ ಮೀಸಲು ವ್ಯವಸ್ಥೆಯನ್ನು ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಸರ್ಕಾರವು ರದ್ದುಗೊಳಿಸಿತ್ತು. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಈ ಮೀಸಲನ್ನು ಮರು ಜಾರಿಗೆ ಆದೇಶಿಸಿತ್ತು. ಬಾಂಗ್ಲಾ ಸರ್ಕಾರ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಇದೀಗ ಸುಪ್ರೀಂ ಕೋರ್ಟ್‌ ಮೀಸಲು ಜಾರಿ ಕುರಿತ ಹೈಕೋರ್ಟ್‌ ತೀರ್ಪಿಗೆ ತಡೆ ನೀಡಿದೆ. ಆದರೆ ವಿದ್ಯಾರ್ಥಿಗಳ ಮುಷ್ಕರ ಮುಂದುವರಿದಿದೆ.

ಪ್ರತಿಭಟನೆ ವೇಳೆ ಮೀಸಲಾತಿ ವಿರೋಧಿ ಸಾವಿರಾರು ಪ್ರತಿಭಟನಾಕಾರರು ಮತ್ತು ಶೇಖ್‌ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ವಿಭಾಗದ ಸದಸ್ಯರ ನಡುವೆ ಘರ್ಷಣೆ ನಡೆಯುತ್ತಲೇ ಇದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ರಬ್ಬರ್ ಬುಲೆಟ್‌ಗಳು, ಅಶ್ರುವಾಯು ಮತ್ತು ಗ್ರೆನೇಡ್‌ಗಳನ್ನು ಬಳಸುತ್ತಿದ್ದಾರೆ. ಆದರೂ ಹಿಂಸಾಚಾರ ನಿಯಂತ್ರಣಕ್ಕೆ ಬರುತ್ತಿಲ್ಲ. ಹಿಂಸಾಚಾರ ತೀವ್ರವಾಗಿದ್ದರಿಂದ ಢಾಕಾಕ್ಕೆ ಮತ್ತು ಅಲ್ಲಿಂದ ಬರುವ ರೈಲ್ವೆ ಸೇವೆಗಳ ಜೊತೆಗೆ ರಾಜಧಾನಿಯೊಳಗೆ ಮೆಟ್ರೋ ರೈಲನ್ನು ಮುಚ್ಚಲಾಗಿದೆ. ದೇಶದ ಹಲವಾರು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ನೆಟ್‌ವರ್ಕ್‌ಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. ಹೆಚ್ಚುತ್ತಿರುವ ಪ್ರತಿಭಟನೆಗಳ ಮಧ್ಯೆ ಬಾಂಗ್ಲಾದೇಶ ಸರ್ಕಾರವು ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ಅನಿರ್ದಿಷ್ಟವಾಗಿ ಮುಚ್ಚಿದೆ.

ವಿದ್ಯಾರ್ಥಿಗಳ ಬೇಡಿಕೆ ಏನು?

ಪಾಕಿಸ್ತಾನದ ವಿರುದ್ಧ 1971ರ ದೇಶದ ಸ್ವಾತಂತ್ರ್ಯದ ಸಂದರ್ಭದಲ್ಲಿ ಹೋರಾಡಿದ ಕುಟುಂಬದವರಿಗೆ ಶೇ. 30ರಷ್ಟು ಮೀಸಲನ್ನು ಉದ್ಯೋಗ ನೇಮಕಾತಿಯಲ್ಲಿ ನೀಡಬಾರದು. ಈ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂಬುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದೆ. ಹೋರಾಟಗಾರರಿಗೆ ಗೌರವ ನೀಡೋಣ. ಆದರೆ ಮೂರನೆ ತಲೆಮಾರಿನ ಮೊಮ್ಮಕ್ಕಳಿಗೆ ಮೀಸಲು ಸೌಕರ್ಯ ಏಕೆ ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.


ಮೀಸಲಾತಿ ಪರಿಣಾಮ ಏನು?

ಬಾಂಗ್ಲಾದೇಶದ ಮೀಸಲಾತಿ ವ್ಯವಸ್ಥೆಯನ್ನು 1972ರಲ್ಲಿ ಪರಿಚಯಿಸಲಾಗಿತ್ತು. ಅಂದಿನಿಂದ ದೇಶಾದ್ಯಂತ ಹಲವಾರು ಬದಲಾವಣೆಗಳಿಗೆ ಕಾರಣವಾಯಿತು. ಈ ವ್ಯವಸ್ಥೆಯು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನ ದೊರೆಯಿತು. ಮಹಿಳೆಯರು ಮತ್ತು ಹಿಂದುಳಿದ ವರ್ಗದವರಿಗೆ ತಲಾ ಶೇ. 10ರಷ್ಟು, ಸ್ಥಳೀಯ ಸಮುದಾಯಗಳಿಗೆ ಶೇ. 5 ಮತ್ತು ಅಂಗವಿಕಲರಿಗೆ ಶೇ. 1ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತ್ತು. ಹೀಗಾಗಿ ಶೇ.44ರಷ್ಟು ಉದ್ಯೋಗ ಮಾತ್ರ ಮೆರಿಟ್‌ ಆಧರಿಸಿ ನೀಡಲಾಗುತ್ತಿತ್ತು. ಇದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ, ಸ್ಯಾತಂತ್ರ್ಯ ಹೋರಾಟದ ಹೆಸರಿನಲ್ಲಿ ಅವರ ಮೊಮ್ಮಕ್ಕಳು ಉದ್ಯೋಗ ಗಿಟ್ಟಿಸುತ್ತಿದ್ದಾರೆ ಎನ್ನುವುದು ವಿದ್ಯಾರ್ಥಿಗಳ ಆಕ್ಷೇಪವಾಗಿದೆ.

ಇದನ್ನೂ ಓದಿ: Air India Flight: 225 ಪ್ರಯಾಣಿಕರನ್ನು ಹೊತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ರಷ್ಯಾದಲ್ಲಿ ಲ್ಯಾಂಡಿಂಗ್‌

ಸರ್ಕಾರ ಹೇಳುವುದೇನು?

ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದ ಅನಂತರ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಬಾಂಗ್ಲಾದೇಶದ ಕಾನೂನು ಸಚಿವ ಅನಿಸುಲ್ ಹಕ್ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಒಪ್ಪಿದಾಗ ನಾವು ಮಾತುಕತೆಗೆ ಕುಳಿತುಕೊಳ್ಳುತ್ತೇವೆ. ಈ ಬಗ್ಗೆ ಮಾತುಕತೆ ನಡೆಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ. ಈ ನಡುವೆ ಹಸೀನಾ ಅವರು ಪ್ರತಿಭಟನೆಯಿಂದ ಆಗಿರುವ ಜೀವಹಾನಿಯನ್ನು ಖಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ತಾಳ್ಮೆಯಿಂದಿರಿ ಎಂದು ಕರೆ ನೀಡಿದ್ದಾರೆ. ಆದರೆ ಈ ಪ್ರತಿಭಟನೆಯ ಹಿಂದೆ ರಾಜಕೀಯದ ಛಾಯೆಯೂ ಇದೆ. 1971ರ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದುದು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಅವಾಮಿ ಲೀಗ್‌ ಪಕ್ಷ. ಈಗ ಪ್ರಧಾನಿ ಆಗಿರುವ ಶೇಖ್‌ ಹಸೀನಾ ಇವರ ಮಗಳು. ಹಾಗಾಗಿ ಅವಾಮಿ ಲೀಗ್‌ನ ಬೆಂಬಲಿಗರಿಗೆ ಮಾತ್ರ ಈ ಮೀಸಲಾತಿಯಿಂದ ಲಾಭ ಆಗುತ್ತದೆ ಎನ್ನುವುದು ಪ್ರತಿಪಕ್ಷಗಳ ಆಪಾದನೆಯಾಗಿದೆ. ಪ್ರತಿಪಕ್ಷಗಳು ಈ ವಿದ್ಯಾರ್ಥಿ ಚಳವಳಿಗೆ ಬೆಂಬಲ ನೀಡುತ್ತಿದ್ದಾರೆ.

Exit mobile version