Site icon Vistara News

Bangla Protest Explainer: ಬಾಂಗ್ಲಾದಲ್ಲಿ ಹಿಂಸೆ ಭುಗಿಲೆದ್ದಿದ್ದೇಕೆ? ಶೇಖ್ ಹಸೀನಾ ಭಾರತಕ್ಕೆ ಪರಾರಿಯಾಗಿದ್ದೇಕೆ? ಮುಂದೇನು?

Bangla Protest Explainer

ನವದೆಹಲಿ/ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ಮೀಸಲಾತಿ ಹೋರಾಟವು (Bangladesh Protests) ನಾಗರಿಕ ದಂಗೆಯಾಗಿ ಬದಲಾಗಿದೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಶೇಖರ್‌ ಹಸೀನಾ ಅವರು ಭಾರತದ ಅಗರ್ತಲಾಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟಾದರೂ, ಬಾಂಗ್ಲಾದಲ್ಲಿ ಹಿಂಸಾಚಾರ ಮುಂದುವರಿದಿದೆ. ಹಾಗಾದರೆ, ಬಾಂಗ್ಲಾದೇಶದಲ್ಲಿ ಹಿಂಸಾಚಾರ (Bangla Protest Explainer) ನಡೆಯುತ್ತಿರುವುದೇಕೆ? ಜನರ ಆಕ್ರೋಶಕ್ಕೆ ಕಾರಣವೇನು? ಶೇಖ್‌ ಹಸೀನಾ ಅವರು ಭಾರತಕ್ಕೆ ಆಗಮಿಸಿದ್ದೇಕೆ? ಮುಂದೇನಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಹಿಂಸಾತ್ಮಕ ಪ್ರತಿಭಟನೆ ಏಕೆ?

ಬಾಂಗ್ಲಾದೇಶದಲ್ಲಿ ಮೀಸಲಾತಿ ಕಾರಣಕ್ಕಾಗಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. 1971ರಲ್ಲಿ ನಡೆದ ಬಾಂಗ್ಲಾದೇಶ ಹೋರಾಟದಲ್ಲಿ ಭಾಗಿಯಾದವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಮೀಸಲಾತಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಕೆಲ ದಿನಗಳ ಹಿಂದೆಯೂ ನಡೆದ ಹಿಂಸಾತ್ಮಕ ಹೋರಾಟದಲ್ಲಿ ನೂರಾರು ಜನ ಮೃತಪಟ್ಟಿದ್ದರು.

ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೇಳುತ್ತಲೇ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌, ಶೇ.30ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತ್ತು. ಆದರೆ, ಸಂಪೂರ್ಣವಾಗಿ ಮೀಸಲಾತಿಯನ್ನು ರದ್ದುಗೊಳಿಸುವ ಬದಲು ಶೇ.5ರಷ್ಟು ಮೀಸಲಾತಿ ಮುಂದುವರಿಸಿದೆ. ಸಂಪೂರ್ಣವಾಗಿ ಮೀಸಲಾತಿ ರದ್ದುಗೊಳಿಸಬೇಕು ಎಂದು ಜನರ ಆಗ್ರಹವಾಗಿದ್ದು, ಇದಕ್ಕಾಗಿ ಪ್ರತಿಭಟನೆ ಆರಂಭವಾಗಿದೆ. ಪ್ರತಿಭಟನೆಗೆ ಪ್ರತಿಪಕ್ಷಗಳೂ ಬೆಂಬಲ ನೀಡಿದ್ದು, ಶೇಖ್‌ ಹಸೀನಾ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅದರಂತೆ, ಶೇಖ್‌ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ.

ಭಾರತದ ಅಗರ್ತಲಾಕ್ಕೆ ಬಂದಿದ್ದೇಕೆ?

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಸೇನೆಯ ಹೆಲಿಕಾಪ್ಟರ್‌ನಲ್ಲಿ ಶೇಖ್‌ ಹಸೀನಾ ಭಾರತದ ಅಗರ್ತಲಾಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಸೇನೆಯ ಹೆಲಿಕಾಪ್ಟರ್‌ನಲ್ಲಿ ಶೇಖ್‌ ಹಸೀನಾ ಪಲಾಯನ ಮಾಡಿದ ವಿಡಿಯೊ ಈಗ ವೈರಲ್‌ ಆಗಿದೆ. ಭಾರತವು ಬಾಂಗ್ಲಾದೇಶಕ್ಕೆ ಮಿತ್ರರಾಷ್ಟ್ರವಾಗಿದ್ದು, ನರೇಂದ್ರ ಮೋದಿ ಅವರಿಗೆ ಶೇಖ್‌ ಹಸೀನಾ ಆಪ್ತರಾಗಿದ್ದಾರೆ. ಪ್ರಾಣಭಯದ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬಂದು ಆಶ್ರಯ ಪಡೆದಿರಬಹುದು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಭಾರತದ ಗಡಿಯಲ್ಲಿ ಬಿಎಸ್‌ಎಫ್‌ ಯೋಧರ ಸಂಖ್ಯೆಯನ್ನು ಜಾಸ್ತಿಗೊಳಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತದ ಮೇಲೆ ಉಂಟಾಗುವ ಪರಿಣಾಮವೇನು?

ಬಾಂಗ್ಲಾದೇಶದಲ್ಲಿ ಹಿಂಸಾಚಾರವು ಭುಗಿಲೆದ್ದಿರುವುದರ ಪರಿಣಾಮವು ಭಾರತದ ಮೇಲೂ ಬೀರುವ ಸಾಧ್ಯತೆ ಹೆಚ್ಚಿದೆ. ಬಾಂಗ್ಲಾದಲ್ಲಿ ಶಾಂತಿ ನೆಲೆಸಿದ್ದಾಗಲೇ ನುಸುಳುಕೋರರು ಭಾರತವನ್ನು ಪ್ರವೇಶಿಸುತ್ತಿದ್ದರು. ಈಗ ಸುಮಾರು 4 ಲಕ್ಷ ಜನ ದಂಗೆಯೆದ್ದಿರುವ ಕಾರಣ ಇನ್ನಷ್ಟು ಜನ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿ, ಅವರು ದೇಶಕ್ಕೆ ತಲೆನೋವಾಗಬಹುದು. ಸೇನೆಯಲ್ಲಿ ಆಡಳಿತ ಯಂತ್ರ ಕುಸಿದುಬಿದ್ದಿದ್ದು, ಮಿಲಿಟರಿ ಆಡಳಿತ ಜಾರಿಗೆ ಬಂದಿರುವ ಕಾರಣ ಭಾರತ ಹಾಗೂ ಬಾಂಗ್ಲಾದೇಶದ ವ್ಯಾಪಾರ, ಒಪ್ಪಂದಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಮಿಲಿಟರಿ ಆಡಳಿತ ಕೊನೆಯಾಗಿ, ಹೊಸ ಸರ್ಕಾರ ರಚನೆಯಾಗಿ, ಪ್ರತಿಭಟನೆ ಶಾಂತವಾಗುವವರೆಗೂ ಭಾರತಕ್ಕೆ ಸಂಕಷ್ಟ ತಪ್ಪಿದ್ದಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಶೇಖ್‌ ಹಸೀನಾ ಭಾರತ ಪರ ನಿಲುವು ಹೊಂದಿದ್ದಾರೆ. ಹಾಗಾಗಿ ಪ್ರತಿಭಟನೆಕಾರರ ಕೋಪ ಭಾರತದ ಮೇಲೆ ತಿರುಗಬಹುದು. ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುವ ಅಪಾಯವೂ ಇದೆ.

ಮಧ್ಯಂತರ ಮಿಲಿಟರಿ ಆಡಳಿತ; ಮುಂದೇನಾಗುತ್ತದೆ?

ಶೇಖ್‌ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಪಲಾಯನಗೈದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮಧ್ಯಂತರ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ದೇಶದ ಆಡಳಿತ ಈಗ ಸೇನೆಯ ವ್ಯಾಪ್ತಿಗೆ ಬಂದಿದೆ. ಸೇನೆಯೇ ಆಡಳಿತ ನಡೆಸುವುದರಿಂದ ಬಾಂಗ್ಲಾದೇಶದಲ್ಲಿ ಕಠಿಣ ನಿಯಮಗಳು ಜಾರಿಯಾಗಿ, ಜನ ಇನ್ನಷ್ಟು ದಂಗೆಯೇಳಬಹುದು. ಮೀಸಲಾತಿ ರದ್ದಾಗುವವರೆಗೂ ಬಾಂಗ್ಲಾದೇಶದಲ್ಲಿ ಅರಾಜಕತೆ ಮುಂದುವರಿಯಬಹುದು. ಇಲ್ಲವೇ, ಪ್ರತಿಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ಮುಂದಾಗಬಹುದು.

ಬಾಂಗ್ಲಾದೇಶದಲ್ಲಿ ಹಿಂಸಾಚಾರ

ಶೇಖ್‌ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾದ ಬಳಿಕ ಪ್ರತಿಪಕ್ಷಗಳ ʼರಾಜಕೀಯ ತಂತ್ರʼದಿಂದಾಗಿ ಪದೇಪದೆ ಹಿಂಸಾಚಾರ ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ 2010ರಲ್ಲಿ ಇದ್ದ ಶೇ.11.8 ಬಡತನ ಪ್ರಮಾಣವು 2022ರ ವೇಳೆಗೆ ಶೇ.5ಕ್ಕೆ ಇಳಿಕೆಯಾಗಿದೆ. ಹಾಗಾಗಿ, ಆಡಳಿತಾತ್ಮಕ ವಿಚಾರದಲ್ಲಿ ಶೇಖ್‌ ಹಸೀನಾ ಒಳ್ಳೆಯ ಹೆಸರು ಗಳಿಸಿದ್ದಾರೆ. ಚುನಾವಣೆಗಳಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದಿದ್ದಾರೆ. ಕಳೆದ ಜನವರಿಯಲ್ಲೇ ಅವರು ಗೆಲುವು ಸಾಧಿಸಿ, ಪ್ರಧಾನಿ ಹುದ್ದೆಗೆ ಏರಿದ್ದಾರೆ.

ಆದರೆ, ಪ್ರತಿಪಕ್ಷಗಳು ಬಾಂಗ್ಲಾದೇಶದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಗಲಭೆಗಳು ಜಾಸ್ತಿಯಾಗುತ್ತಿವೆ. ವರದಿಗಳ ಪ್ರಕಾರ, 2009ರಿಂದ 2022ರ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ 2,500 ಜನ ಬಲಿಯಾಗಿದ್ದಾರೆ. ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷದ ಕಾರ್ಯಕರ್ತರು ಸೇರಿ ಸಾವಿರಾರು ಜನ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.

ಇದನ್ನೂ ಓದಿ: Sheikh Hasina: ರಾಜೀನಾಮೆ ನೀಡಿ ಶೇಖ್‌ ಹಸೀನಾ ವಿದೇಶಕ್ಕೆ ಪಲಾಯನ; ಸುರಕ್ಷತೆಗಾಗಿ ಭಾರತಕ್ಕೆ ಆಗಮನ?

Exit mobile version