Site icon Vistara News

Bangladesh Unrest: ಬಾಂಗ್ಲಾ ಹಂಗಾಮಿ ಪ್ರಧಾನಿಯಾಗಿ ಇಂದು ಮೊಹಮ್ಮದ್‌ ಯೂನಸ್‌ ಪದಗ್ರಹಣ; ಶಾಂತಿಗಾಗಿ ಕರೆ

muhammad yunus

ಢಾಕಾ: ಮೀಸಲಾತಿ ವಿರೋಧಿಸಿ ನಿರಂತರ ಪ್ರತಿಭಟನೆ, ಗಲಭೆಗಳ (Bangladesh Unrest) ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶವನ್ನು (Bangladesh) ತೊರೆದು ಪರಾರಿಯಾಗಿರುವ ನಂತರ, ದೇಶದ ಮಧ್ಯಂತರ ಸರ್ಕಾರದ (interim Budget) ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ (Muhammad Yunus) ಅವರನ್ನು ನೇಮಕ ಮಾಡಲಾಗಿದೆ. ಇನ್ನು, ಮೊಹಮ್ಮದ್‌ ಯೂನಸ್‌ ಅವರು ಗುರುವಾರ (ಆಗಸ್ಟ್‌ 8) ಹಂಗಾಮಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

”ಮೊಹಮ್ಮದ್‌ ಯೂನಸ್‌ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜತೆಗೆ 15 ಸಲಹೆಗಾರರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ” ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್‌ ವಾಕರ್‌ ಉಜ್‌ ಜಮಾನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗುರುವಾರ ರಾತ್ರಿ 8 ಗಂಟೆಗೆ ಮೊಹಮ್ಮದ್‌ ಯೂನಸ್‌ ಅವರು ಪ್ರಧಾನಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಮೊಹಮ್ಮದ್‌ ಯೂನಸ್‌ ಅವರು ಸದ್ಯ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿದ್ದಾರೆ. ಎಮಿರೇಟ್ಸ್‌ ವಿಮಾನದಲ್ಲಿ ಮೊಹಮ್ಮದ್‌ ಯೂನಸ್‌ ಅವರು ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಢಾಕಾ ತಲುಪಲಿದ್ದಾರೆ. ಇದರಿಂದಾಗಿ ಢಾಕಾ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪದಗ್ರಹಣಕ್ಕೂ ಮುನ್ನ ದೇಶದ ಜನರಿಗೆ ಕರೆ ನೀಡಿರುವ ಅವರು, “ಯಾರೂ ಕೂಡ ಹಿಂಸೆಯನ್ನು ಪ್ರಚೋದಿಸಬಾರು ಹಾಗೂ ಹಿಂಸಾಚಾರದಲ್ಲಿ ತೊಡಗಬಾರದು. ಎಲ್ಲರೂ ಶಾಂತಿ ಕಾಪಾಡೋಣ” ಎಂದು ಹೇಳಿದ್ದಾರೆ.

ಶಾಂತಿಗಾಗಿ ಖಲೀದಾ ಜಿಯಾ ಮನವಿ

ಬಾಂಗ್ಲಾದೇಶದ ಮಾಜಿ ಪ್ರಧಾನಿ, ಬಿಎನ್‌ಪಿ ಮುಖ್ಯಸ್ಥೆ ಖಲೀದಾ ಜಿಯಾ ಅವರು ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಶಾಂತಿಯ ಸಂದೇಶ ಸಾರಿದ್ದಾರೆ. “ನಮ್ಮ ದೇಶದ ಜನರ ಹೋರಾಟವೇ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ. ಇದು ಸಿಟ್ಟು ಅಥವಾ ಸೇಡು ಅಲ್ಲ. ಇದು ಪ್ರೀತಿ ಹಾಗೂ ಶಾಂತಿಯಿಂದ ದೇಶವನ್ನು ಮರು ನಿರ್ಮಾಣ ಮಾಡುವ ಗುರಿಯಾಗಿದೆ. ಹಾಗಾಗಿ, ಎಲ್ಲರೂ ಶಾಂತಿಯಿಂದ ವರ್ತಿಸಿ, ಹೊಸ ಹಾಗೂ ಸಮೃದ್ಧ ಬಾಂಗ್ಲಾದೇಶವನ್ನು ನಿರ್ಮಿಸೋಣ” ಎಂದು ಕರೆ ನೀಡಿದ್ದಾರೆ.

ಮತ್ತೊಂದೆಡೆ, ಆಶ್ರಯ ನೀಡಲು ಅಮೆರಿಕ ಹಾಗೂ ಬ್ರಿಟನ್‌ ನಿರಾಕರಿಸಿದ ಕಾರಣ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರು ಭಾರತದಲ್ಲಿಯೇ ಉಳಿದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಅವರನ್ನು ಇರಿಸಲಾಗಿದ್ದು, ಕೇಂದ್ರ ಸರ್ಕಾರವು ಬಿಗಿ ಭದ್ರತೆ ಒದಗಿಸಿದೆ. ಬೇರೆ ದೇಶಗಳಲ್ಲಿ ಅವರಿಗೆ ಆಶ್ರಯ ಸಿಗದ ಕಾರಣ ಭಾರತದಲ್ಲಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

Exit mobile version