ಢಾಕಾ: ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ (Bangladesh Protests) ಹಲವು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ನೂರಾರು ಜನ ಮೃತಪಟ್ಟ ಬೆನ್ನಲ್ಲೇ ಮತ್ತೊಂದು ಹಿಂಸಾಚಾರ ಭುಗಿಲೆದ್ದಿದೆ. ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾರೂಪ ತಾಳಿದ್ದು, ಮೃತರ ಸಂಖ್ಯೆ 98ಕ್ಕೆ ತಲುಪಿದೆ. ಈ ಪೈಕಿ 14 ಮಂದಿ ಪೊಲೀಸರು ಅಸುನೀಗಿದ್ದು, ಬಾಂಗ್ಲಾದೇಶಕ್ಕೆ ತೆರಳದಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಭಾನುವಾರ (ಆಗಸ್ಟ್ 4) ನಡೆದ ಭೀಕರ ಘರ್ಷಣೆಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಜುಲೈಯಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಮೃತರ ಸಂಖ್ಯೆ ಒಟ್ಟು 300ಕ್ಕೆ ಏರಿದೆ. ಬಾಂಗ್ಲಾದಲ್ಲಿ ಕೆಲ ದಿನಗಳ ಹಿಂದೆ ತೀವ್ರ ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಪ್ರತಿಪಕ್ಷಗಳ ಮುಖಂಡರು, ಸಾರ್ವಜನಿಕರು ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಇಲ್ಲವೇ ಶೇಖ್ ಹಸೀನಾ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
Mass student protests continue in Bangladesh: at least 33 people have died in the past 24 hours, dozens have been injured, including gunshot wounds from the police — local newspaper The Daily Star. pic.twitter.com/lzTtdmAhNH
— ZEMA (@ZemaAStory) August 4, 2024
ಭಾನುವಾರ ಸಾವಿರಾರು ಪ್ರತಿಭಟನಾಕಾರರು ದೇಶದ ಹಲವಾರು ಭಾಗಗಳಲ್ಲಿ ಜಮಾಯಿಸಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರು ಈಶಾನ್ಯ ಪಟ್ಟಣ ಎನಾಯೆತ್ಪುರದ ಠಾಣೆಗೂ ಮುತ್ತಿಗೆ ಹಾಕಿದರು. ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೋಮವಾರ, ಮಂಗಳವಾರ ಮತ್ತು ಬುಧವಾರ ಮೂರು ದಿನಗಳ ಸಾರ್ವತ್ರಿಕ ರಜಾದಿನವನ್ನು ಘೋಷಿಸಲಾಗಿದೆ.
ಎಚ್ಚರಿಕೆ ನೀಡಿದ ಭಾರತ
ಈ ಮಧ್ಯೆ ಭಾರತ ಬಾಂಗ್ಲಾದೇಶದಲ್ಲಿರುವ ತನ್ನ ಎಲ್ಲ ಪ್ರಜೆಗಳಿಗೆ ತೀವ್ರ ಎಚ್ಚರಿಕೆ ವಹಿಸಲು ಸೂಚನೆ ನೀಡಿದೆ. ಅನಗತ್ಯವಾಗಿ ಹೊರಗಡೆ ಓಡಾಡದಂತೆ ತಿಳಿಸಿದೆ. ʼʼಸಿಲ್ಹೆಟ್‌ನ ಸಹಾಯಕ ಹೈಕಮಿಷನ್ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಭಾರತೀಯ ಪ್ರಜೆಗಳು ಈ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಕೋರಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಸಂಖ್ಯೆ +88-01313076402 ಅನ್ನು ಸಂಪರ್ಕಿಸಿ” ಎಂದು ಸಹಾಯಕ ಹೈಕಮಿಷನ್ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಹಿಂಸಾಚಾರಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಇದು ಆದಷ್ಟು ಶೀಘ್ರ ಕೊನೆಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಗಳು ಬಾಂಗ್ಲಾದೇಶದಾದ್ಯಂತ ಸರ್ಕಾರಿ ವಿರೋಧಿ ಆಂದೋಲನವಾಗಿ ಬೆಳೆದಿವೆ. ಇದು ಚಲನಚಿತ್ರ ತಾರೆಯರು, ಸಂಗೀತಗಾರರು ಮತ್ತು ಗಾಯಕರು ಸೇರಿದಂತೆ ದೇಶದ ಎಲ್ಲ ವರ್ಗಗಳ ಜನರನ್ನು ಆಕರ್ಷಿಸಿದೆ. ಜನರ ಬೆಂಬಲಕ್ಕೆ ಕರೆ ನೀಡುವ ಹಾಡುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿವೆ. ಹೆಚ್ಚುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕುವ ಉದ್ದೇಶದಿಂದ ಮಾತುಕತೆಗೆ ಹಸೀನಾ ಅವರ ಆಹ್ವಾನವನ್ನು ಪ್ರತಿಭಟನಾಕಾರರು ತಿರಸ್ಕರಿಸಿದ್ದಾರೆ.