Site icon Vistara News

Bangladesh Protests: ಸರ್ಕಾರಿ ಉದ್ಯೋಗದಲ್ಲಿನ ಶೇ. 30 ಮೀಸಲಾತಿ ಕಡಿತಗೊಳಿಸಿದ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ

Bangladesh Protests

Bangladesh Protests

ಢಾಕಾ: ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶ (Bangladesh)ದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿರುವ ಮಧ್ಯೆಯೇ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ (Bangladesh Protests) ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ (Job Reservation) ನೀಡುವ ನಿಯಮವನ್ನು ಕೋರ್ಟ್‌ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ.

“ಹೈಕೋರ್ಟ್ ತೀರ್ಪು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ” ಎಂದು ಅಟಾರ್ನಿ ಜನರಲ್ ಎ.ಎಂ.ಅಮೀನ್ ಉದ್ದೀನ್ ತಿಳಿಸಿದರು. ʼʼನಾಗರಿಕ ಸೇವಾ ಉದ್ಯೋಗ (Civil service jobs)ಗಳಲ್ಲಿ ಶೇ. 5 ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರ ಮಕ್ಕಳಿಗೆ ಮತ್ತು ಶೇ. 2ರಷ್ಟು ಇತರ ವರ್ಗಗಳಿಗೆ ಮೀಸಲಿಡಲಾಗುವುದುʼʼ ಎಂದು ಅವರು ಹೇಳಿದರು. ಅದರ ಪ್ರಕಾರ ನಿವೃತ್ತ ಸೈನಿಕರ ಸಂಬಂಧಿಕರ ಕೋಟಾವನ್ನು ಶೇ. 30ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಈಗ ಶೇ. 93ರಷ್ಟು ಹುದ್ದೆಗಳನ್ನು ಅರ್ಹತೆಯ ಆಧಾರದ ಮೇಲೆ ಭರ್ತಿ ಮಾಡಬೇಕಾಗಿದೆ. ಉಳಿದ ಶೇ. 2 ಅನ್ನು ಜನಾಂಗೀಯ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು ಮತ್ತು ಅಂಗವಿಕಲರಿಗೆ ಹಂಚಿಕೆ ಮಾಡಲಾಗುತ್ತದೆ.

ವಿವಾದಾತ್ಮಕ ನಾಗರಿಕ ಸೇವಾ ನೇಮಕಾತಿ ನಿಯಮಗಳ ಬಗ್ಗೆ ತೀರ್ಪು ನೀಡಿದ ನಂತರ ಬಾಂಗ್ಲಾದೇಶದ ಉನ್ನತ ನ್ಯಾಯಾಲಯವು ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ತರಗತಿಗೆ ಮರಳುವಂತೆ ಕೇಳಿದೆ ಎಂದು ಪ್ರಕರಣದಲ್ಲಿ ಭಾಗಿಯಾಗಿರುವ ವಕೀಲರೊಬ್ಬರು ತಿಳಿಸಿದರು. ಇದುವರೆಗೆ ಹಿಂಸಾಚಾರದಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಏನಿದು ವಿವಾದ?

1971ರಲ್ಲಿ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರು ಮತ್ತು ಹೋರಾಟಗಾರರ ಸಂಬಂಧಿಕರಿಗೆ ಉದ್ಯೋಗಗಳಲ್ಲಿ ಶೇ. 30ರಷ್ಟು ಮೀಸಲಾತಿ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ರಾಜಧಾನಿ ಢಾಕಾ ಮತ್ತು ಇತರ ನಗರಗಳಲ್ಲಿ ನೂರಾರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ತಿಂಗಳಿನಿಂದ ರ‍್ಯಾಲಿಗಳನ್ನು ಪ್ರಾರಂಭಿಸಿದರು. ಶಾಂತವಾಗಿಯೇ ನಡೆಯುತ್ತಿದ್ದ ಪ್ರತಿಭಟನೆಕಾರರ ಮೇಲೆ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತರೂಢ ಅವಾಮಿ ಲೀಗ್‌ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದರು. ಆ ಬಳಿಕ ಪ್ರತಿಭಟನೆ ಹಿಂಸೆಯ ರೂಪ ತಾಳಿತು.

ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿರುವ ಕಾರಣ ಸುಮಾರು 1,000ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. 778 ಭಾರತೀಯರು ಭೂಮಾರ್ಗದಲ್ಲಿ ತಾಯ್ನೆಲಕ್ಕೆ ಬಂದು ಸೇರಿದ್ದು, 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿಮಾನದಲ್ಲಿ ಮರಳಿದ್ದಾರೆ.

ಇದನ್ನೂ ಓದಿ: Bangla Agitation Explainer: ಬಾಂಗ್ಲಾದೇಶ ಏಕೆ ಹೊತ್ತಿ ಉರಿಯುತ್ತಿದೆ? ವಿದ್ಯಾರ್ಥಿಗಳು ಏಕೆ ಹಿಂಸಾಚಾರಕ್ಕಿಳಿದಿದ್ದಾರೆ?

ಈ ಪ್ರತಿಭಟನೆಯ ಹಿಂದೆ ರಾಜಕೀಯದ ಛಾಯೆಯೂ ಇದೆ. 1971ರ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದುದು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಅವಾಮಿ ಲೀಗ್‌ ಪಕ್ಷ. ಈಗ ಪ್ರಧಾನಿ ಆಗಿರುವ ಶೇಖ್‌ ಹಸೀನಾ ಇವರ ಮಗಳು. ಹಾಗಾಗಿ ಅವಾಮಿ ಲೀಗ್‌ನ ಬೆಂಬಲಿಗರಿಗೆ ಮಾತ್ರ ಈ ಮೀಸಲಾತಿಯಿಂದ ಲಾಭ ಆಗುತ್ತದೆ ಎನ್ನುವುದು ಪ್ರತಿಪಕ್ಷಗಳ ಆರೋಪ.

Exit mobile version