Site icon Vistara News

Bangladesh Unrest: ಶೇಖ್‌ ಹಸೀನಾ ಅವರ ಪಕ್ಷದ ಮುಖಂಡರು, ಕಾರ್ಯಕರ್ತರೇ ಟಾರ್ಗೆಟ್‌; ಒಂದೇ ದಿನ 29 ಜನ ಬಲಿ

Bangladesh Unrest

ಢಾಕಾ: ಬಾಂಗ್ಲಾದೇಶ(Bangladesh Unrest)ದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ(Sheikh Hasina) ಅವರ ಅವಾಮಿ ಲೀಗ್‌ ಪಕ್ಷದ 20 ಮುಖಂಡರು ಸೇರಿದಂತೆ ಬರೋಬ್ಬರಿ 29 ಜನರ ಮೃತದೇಹ ದೇಶಾದ್ಯಂತ ಬುಧವಾರ ಪತ್ತೆಯಾಗಿದೆ. ಶೇಖ್‌ ಹಸೀನಾ ಪ್ರಧಾನಿ ಪಟ್ಟದಿಂದ ಕೆಳಗಿಳಿದಿರುವ ಬೆನ್ನಲ್ಲೇ ದೇಶಾದ್ಯಂತ ಈ ಮಾರಣಹೋಮ ನಡೆದಿದೆ.

ಸತ್ಖೀರದಲ್ಲಿ 10 ಜನ ಮತ್ತು ಕೊಮಿಲ್ಲಾ ಪ್ರದೇಶದಲ್ಲಿ 11ಕ್ಕೂ ಅಧಿಕ ಗುಂಪು ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶಗಳಲ್ಲಿ ಅವಾಮಿ ಲೀಗ್‌ನ ಮುಖಂಡರು ಮತ್ತು ಕಾರ್ಯಕರ್ತರ ಮನೆ, ವ್ಯಾಪಾರ ಮಳಿಗೆಗಳನ್ನು ಗುರಿಯಾಗಿಸಿ ಭೀಕರ ದಾಳಿ ನಡೆಯುತ್ತಿದೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ ಅಶೋಕ್ತಾಲಾದಲ್ಲಿ ಮಾಜಿ ಕೌನ್ಸಿಲರ್ ಎಂಡಿ ಶಾ ಆಲಂ ಅವರ ಮನೆಯ ಮೇಲೆ ದಾಳಿ ನಡೆದಿದ್ದು, ಉದ್ರಿಕ್ತ ಗುಂಪೊಂದು ಬೆಂಕಿ ಹಚ್ಚಿದೆ. ಪರಿಣಾಮವಗಿ ಐವರು ಯುವಕರು ಸೇರಿದಂತೆ ಆರು ಮಂದಿ ಬೆಂಕಿಗೆ ಬಲಿಯಾಗಿದ್ದು, ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಅವರ ಮೃತದೇಹಗಳು ಪತ್ತೆಯಾಗಿವೆ.

ಅದೇ ರೀತಿ ನಾಟೋರ್-2 (ಸದರ್ ಮತ್ತು ನಲ್ದಂಗ) ಕ್ಷೇತ್ರದ ಸಂಸದ ಶಫೀಕುಲ್ ಇಸ್ಲಾಂ ಶಿಮುಲ್ ಅವರ ಮನೆಗೆ ಗುಂಪೊಂದು ಬೆಂಕಿ ಹಚ್ಚಿದಾಗ ನಾಲ್ವರು ಸಾವನ್ನಪ್ಪಿದ್ದಾರೆ. ನಂತರ ಅವರ ಶವಗಳು ಮನೆಯ ವಿವಿಧ ಕೊಠಡಿಗಳು ಮತ್ತು ಬಾಲ್ಕನಿಗಳಲ್ಲಿ ಪತ್ತೆಯಾಗಿವೆ.

ಅವಾಮಿ ಲೀಗ್ ಕಚೇರಿ ಮೇಲೆ ದಾಳಿ

ಢಾಕಾದಲ್ಲಿ, ಗುಲಿಸ್ತಾನ್ ಪ್ರದೇಶದಲ್ಲಿನ ಅವಾಮಿ ಲೀಗ್‌ನ ಕೇಂದ್ರ ಕಚೇರಿಯ ಭಾಗಗಳಿಗೆ ಪದೇ ಪದೇ ಬೆಂಕಿ ಹಚ್ಚಲಾಯಿತು, ನೂರಾರು ಜನರು ಉರಿಯುತ್ತಿರುವ ಕಟ್ಟಡದಿಂದ ಪೀಠೋಪಕರಣಗಳು, ಟೈಲ್ಸ್, ರಾಡ್‌ಗಳು ಮತ್ತು ಇತರ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಹಸೀನಾ ರಾಜೀನಾಮೆ ನೀಡಿದ ಸ್ವಲ್ಪ ಸಮಯದ ನಂತರ ಕಚೇರಿಗೆ ಬೆಂಕಿ ಹಚ್ಚಲಾಯಿತು ಮತ್ತು ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಮತ್ತೆ ದಾಳಿ ನಡೆಸಲಾಯಿತು.

ನಿರಂತರ ಪ್ರತಿಭಟನೆ, ಗಲಭೆಗಳ (Bangladesh Unrest) ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶವನ್ನು (Bangladesh) ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿರುವ ತಮ್ಮ ನಿವಾಸಿಗಳ ಸುರಕ್ಷತೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಮಧ್ಯೆ ಏರ್ ಇಂಡಿಯಾ, ವಿಸ್ತಾರ ಮತ್ತು ಇಂಡಿಗೋ ವಿಮಾನಗಳು ಬುಧವಾರ (ಆಗಸ್ಟ್‌ 7) ದಿಲ್ಲಿಯಿಂದ ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ನಿಗದಿಯಂತೆ ಹಾರಾಟ ನಡೆಸಲು ತೀರ್ಮಾನಿಸಿವೆ. ಜತೆಗೆ ಏರ್ ಇಂಡಿಯಾ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನ ಸೇವೆಯನ್ನೂ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

Exit mobile version