ಢಾಕಾ: ಬಾಂಗ್ಲಾದೇಶ (Bangladesh Unrest)ದಲ್ಲಿ ತಲೆದೋರಿರುವ ಅರಾಜಕತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಮತ್ತೊಂದು ಹಿಂದೂ ದೇವಾಲಯ ಮತ್ತು ಮನೆಗೆ ಬೆಂಕಿ ಹಚ್ಚಲಾಗಿದೆ.
ಮಂಗಳವಾರ (ಆಗಸ್ಟ್ 13) ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕುರಿಗ್ರಾಮ್ ಜಿಲ್ಲೆಯ ಮುಕುಲ್ ಚಂದ್ರರಾಯ್ ಎಂಬವರ ಮನೆ ಮತ್ತು ದೇವಾಲಯದ ಮೇಲೆ ದಾಳಿ ನಡೆದಿದೆ. ರಾಯ್ ಅವರ ಮನೆ ಮತ್ತು ದೇವಸ್ಥಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ದುಷ್ಕರ್ಮಿಗಳು ಬೆಂಕಿ ಹಚ್ಚಿದ ತಕ್ಷಣ ಸ್ಥಳೀಯರು ಧಾವಿಸಿ ಬಂದು ನಂದಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ಎಲ್ಲವೂ ಹೊತ್ತಿ ಉರಿದಿತ್ತು. ಮನೆಯಲ್ಲಿದ್ದ ಎಲ್ಲವೂ ನಾಶವಾಗಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಮುಕುಲ್ ಚಂದ್ರರಾಯ್ ಅವರು ಕುರಿಗ್ರಾಮ್ ಜಿಲ್ಲೆಯ ರಾಜರ್ಹತ್ ಉಪಜಿಲಾದ ಚಕೀರ್ ಪೋಷಾ ಯೂನಿಯನ್ ಅಡಿಯಲ್ಲಿ ಪಟೋವರಿ ಪ್ಯಾರಾ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರ ಪತ್ನಿ ಮತ್ತು ಮಗ ತಮ್ಮ ಸುಟ್ಟ ಮನೆ ಮತ್ತು ದೇವಾಲಯದ ಮುಂದೆ ಅಳುತ್ತಿರುವುದು ಕಂಡು ಬಂದಿದೆ.
#WATCH | Bangladesh: Members of the minority Hindu community hold a protest outside Jamuna State Guest House in Dhaka, where Bangladesh interim govt chief Muhammad Yunus is residing. The protestors are holding posters of their family members who went missing during the incidents… pic.twitter.com/uesXUhFJMW
— ANI (@ANI) August 13, 2024
ಸೇನೆಯೊಂದಿಗೆ ಸಂಘರ್ಷ
ಹೆಚ್ಚುತ್ತಿರುವ ಅಶಾಂತಿಯ ಮಧ್ಯೆ ಬಾಂಗ್ಲಾದೇಶದ ಹಿಂದೂ ಸಮುದಾಯದವರು ಮಂಗಳವಾರ ಢಾಕಾದಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ವಾರ ನಡೆದ ರಾಜಕೀಯ ವಿಪ್ಲವದ ನಂತರ ದೇಶದಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ನೊಬೆಲ್ ಪ್ರಶಸ್ತಿ ವಿಜೇತ, ಮಧ್ಯಂತರ ಸರ್ಕಾರದ ನಾಯಕ ಮುಹಮ್ಮದ್ ಯೂನುಸ್ ಪ್ರಸ್ತುತ ತಂಗಿರುವ ಢಾಕಾದ ಜಮುನಾ ಅತಿಥಿ ಗೃಹದ ಹೊರಗೆ ಪ್ರತಿಭಟನಾಕಾರರು ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಕಾಣೆಯಾದ ಕುಟುಂಬ ಸದಸ್ಯರ ಪೋಸ್ಟರ್‌ಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಮತ್ತು ಬಾಂಗ್ಲಾದೇಶ ಸೈನಿಕರ ನಡುವೆ ಘರ್ಷಣೆಯೂ ನಡೆಯಿತು.
ಇತ್ತೀಚೆಗೆ ಢಾಕಾದ ಐತಿಹಾಸಿಕ ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯೂನುಸ್ ಹಿಂದೂ ಸಮುದಾಯಕ್ಕೆ ರಕ್ಷಣೆ ಒದಗಿಸುವ ಭರವಸೆ ನೀಡಿದ್ದರು. ಹಕ್ಕುಗಳು ಎಲ್ಲರಿಗೂ ಸಮಾನವಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದರು. “ಹಕ್ಕುಗಳು ಎಲ್ಲರಿಗೂ ಸಮಾನವಾಗಿ ಲಭಿಸಬೇಕಿದೆ. ದಯವಿಟ್ಟು ತಾಳ್ಮೆಯಿಂದಿರಿ” ಎಂದು ಯೂನುಸ್ ಹೇಳಿದ್ದರು. ಅದಾಗ್ಯೂ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿಯುತ್ತಿರುವುದು ಕಳವಳ ಹುಟ್ಟುಹಾಕಿದೆ.
ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಹಿಂದೂಗಳು ಸುಮಾರು ಶೇ. 8ರಷ್ಟಿದ್ದು, ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಗುಂಪು ಎನಿಸಿಕೊಂಡಿದೆ. ದಂಗೆ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈಗಾಗಲೇ ಹಲವೆಡೆ ಶಿಲ್ಪಗಳು, ವಿಗ್ರಹಗಳು ಮತ್ತು ದೇವಾಲಯಗಳನ್ನು ನಾಶಪಡಿಸಲಾಗಿದೆ. ವಾಸ್ತವವಾಗಿ, ಸೇನೆ ಮತ್ತು ಪೊಲೀಸರು ಹಿಂದೂಗಳ ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Bangladesh Unrest: ಬಾಂಗ್ಲಾ ಹಿಂದೂಗಳ ಪರ ಸೋಶಿಯಲ್ ಮೀಡಿಯಾ ಅಭಿಯಾನ; All eyes on hindus ಭಾರೀ ಟ್ರೆಂಡ್!
ʼʼಕೆಲವು ದಿನಗಳ ಹಿಂದೆ ಒಬ್ಬ ಹಿಂದೂ ಪ್ರಾಧ್ಯಾಪಕನನ್ನು ಬಡಿಗೆಯಿಂದ ಬರ್ಬರವಾಗಿ ಕೊಲ್ಲಲಾಯಿತು. ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬಗಳು ಎಲ್ಲವನ್ನೂ ಕಳೆದುಕೊಂಡಿವೆ ಮತ್ತು ಈಗಲೂ ಹಿಂದೂ ಸಂಘಟನೆಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತಿವೆ. ಈ ದಾಳಿಗಳು ಮೂಲಭೂತವಾದಿಗಳಿಂದ ಅಲ್ಲ, ಆದರೆ ಪ್ರತಿಭಟನೆಯು ಭಯೋತ್ಪಾದಕ ಚಳುವಳಿಯಾಗುತ್ತಿದೆʼʼ ಎಂದು ಮೂಲಗಳು ತಿಳಿಸಿವೆ.