Site icon Vistara News

Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

Bangladesh Unrest

ಉದ್ಯೋಗ ಮೀಸಲಾತಿ (Job reservation) ವಿರೋಧದ ನೆಪದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ತಳೆದ ಬಳಿಕ ಬಾಂಗ್ಲಾದಲ್ಲಿ (Bangladesh Unrest) ಪ್ರಧಾನಮಂತ್ರಿ ಶೇಖ್ ಹಸೀನಾ (PM Sheikh Hasina) ಅವರ ಸರ್ಕಾರ ಪತನಗೊಂಡಿತ್ತು. ಇದರಿಂದ ನೆರೆಯ ದೇಶಗಳಲ್ಲೂ ಆತಂಕ ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಹಲವು ಸುಪ್ರಸಿದ್ಧ ಕಂಪನಿಗಳ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿರುವುದು.

ಮಾರಿಕೋ, ಡಾಬರ್, ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ, ಪೆಪ್ಸಿಕೋ ಮತ್ತು ಕೋಕಾ-ಕೋಲಾದಂತಹ ಎಫ್‌ಎಂಸಿಜಿ ಕಂಪನಿಗಳು ಈಗ ಬಾಂಗ್ಲಾದಲ್ಲಿ ತೊಂದರೆಗೆ ಸಿಲುಕಿಕೊಂಡಿದೆ. ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯೊಳಗೆ ಇರಲು ಮತ್ತು ಮನೆಯಿಂದಲೇ ಕೆಲಸ ಮಾಡಲು ಸಲಹೆ ನೀಡಿವೆ. ಇನ್ನು ಕೆಲವರು ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಮಾರಾಟ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.

ಪ್ರಮುಖ ಕಂಪನಿಗಳಿಗೆ ಆತಂಕ

ಮಾರಿಕೊ, ಡಾಬರ್, ಇಮಾಮಿ ಮತ್ತು ಎಚ್‌ಯುಎಲ್ ಸೇರಿದಂತೆ ಭಾರತೀಯ ಎಫ್‌ಎಂಸಿಜಿ ಕಂಪೆನಿಗಳು ಬಾಂಗ್ಲಾದೇಶದಲ್ಲಿ ಶೇ. 1-5ರಷ್ಟು ಆದಾಯವನ್ನು ಹೊಂದಿವೆ. ಹೆಚ್‌ಯುಎಲ್ ಮ್ಯಾನೇಜಿಂಗ್ ಡೈರೆಕ್ಟರ್ ರೋಹಿತ್ ಜಾವಾ ಅವರು ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ಪರಿಸ್ಥಿತಿ ಶೀಘ್ರದಲ್ಲೇ ಸ್ಥಿರಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಯಾಕೆಂದರೆ ಇದು ಯೂನಿಲಿವರ್‌ಗೆ ಬಹಳ ಮುಖ್ಯವಾದ ದೇಶವಾಗಿದೆ. ಪರಿಸ್ಥಿತಿಯು ಸಹಜವಾದ ತಕ್ಷಣ ನಾವು ಮತ್ತೆ ಕಾರ್ಯಾಚರಣೆಗೆ ಮರಳುತ್ತೇವೆ. ಯಾಕೆಂದರೆ ಹೆಚ್ಯುಎಲ್ ನಲ್ಲಿರುವಂತೆ ನಾವು ಬಾಂಗ್ಲಾದೇಶದಲ್ಲಿ ಸಾಕಷ್ಟು ದೈನಂದಿನ ಸರಕು ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತೇವೆ. ಆದ್ದರಿಂದ ನಾವು ಎಷ್ಟು ಬೇಗನೆ ಕಾರ್ಯಾಚರಣೆಗೆ ಹಿಂತಿರುಗಬಹುದು ಅಷ್ಟು ಶೀಘ್ರದಲ್ಲೇ ನಾವು ಮತ್ತೆ ಪೂರೈಕೆಯನ್ನು ಪ್ರಾರಂಭಿಸಬಹುದು. ಇದು ಗ್ರಾಹಕರಿಗೆ ಸಹ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

Bangladesh Unrest


ಗಣನೀಯ ಆದಾಯ

ಮಾರಿಕೊದ ವ್ಯವಸ್ಥಾಪಕ ನಿರ್ದೇಶಕ ಸೌಗತಾ ಗುಪ್ತೋ ಅವರು ಪ್ರತಿಕ್ರಿಯಿಸಿ, ಅಂತಾರಾಷ್ಟ್ರೀಯ ಆದಾಯದ ಶೇ. 44ರಷ್ಟು ಬಾಂಗ್ಲಾದೇಶದಿಂದ ಬರುತ್ತದೆ. ಬಾಂಗ್ಲಾದೇಶದ ವ್ಯವಹಾರವು ವಿಶಾಲ ಮತ್ತು ದೃಢವಾಗಿದೆ. ಪ್ರಸ್ತುತ ಪರಿಸ್ಥಿತಿ ಹಿನ್ನೆಲೆಯಲ್ಲಿ ನಾವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಪ್ರಧಾನಿ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ತಕ್ಷಣ ಮಾರಿಕೊ ಆದಾಯ ಶೇಕಡಾ 5ಕ್ಕಿಂತ ಹೆಚ್ಚು ಕುಸಿದಿದೆ.

ತಜ್ಞರು ಏನು ಹೇಳುತ್ತಾರೆ?

ಬಾಂಗ್ಲಾದೇಶವು ಭಾರತಕ್ಕೆ ಪ್ರಮುಖ ವ್ಯಾಪಾರ ಪಾಲುದಾರನಾಗಿದ್ದರೂ, ತೀವ್ರ ರಾಜಕೀಯ ಬಿಕ್ಕಟ್ಟಿನ ಪರಿಣಾಮವು ಭಾರತದ ಒಟ್ಟಾರೆ ವ್ಯಾಪಾರದ ಮೇಲೆ ಸೀಮಿತ ಪರಿಣಾಮವನ್ನು ಮಾತ್ರ ಬೀರುತ್ತದೆ. ಬಾಂಗ್ಲಾದೇಶಕ್ಕೆ ರಫ್ತು ಪ್ರಮಾಣ ಭಾರತದ ಒಟ್ಟು ಸರಕು ರಫ್ತಿನ ಕೇವಲ ಶೇ. 2.5ರಷ್ಟಿದೆ.

ಇದನ್ನೂ ಓದಿ: Bangladesh Unrest: ಶೇಖ್‌ ಹಸೀನಾ ಅವರ ಪಕ್ಷದ ಮುಖಂಡರು, ಕಾರ್ಯಕರ್ತರೇ ಟಾರ್ಗೆಟ್‌; ಒಂದೇ ದಿನ 29 ಜನ ಬಲಿ

ಬಾಂಗ್ಲಾಕ್ಕೆ ರಫ್ತು ಮಾಡುವ ನಿರ್ದಿಷ್ಟ ಉದ್ಯಮ ವಿಭಾಗದಲ್ಲಿ ಹತ್ತಿ ನೂಲು ದೊಡ್ಡ ಪಾಲನ್ನು ಹೊಂದಿದೆ. ಇದರ ಮೇಲೆ ಕೊಂಚ ಪರಿಣಾಮ ಉಂಟಾಗಬಹುದು. ಮತ್ತೊಂದೆಡೆ ಬಾಂಗ್ಲಾದೇಶಕ್ಕೆ ಈ ಹಿಂದೆ ರಫ್ತು ಮಾರುಕಟ್ಟೆಯನ್ನು ಕಳೆದುಕೊಂಡಿದ್ದ ಭಾರತೀಯ ಆರ್‌ಎಂಜಿಗೆ ಇದು ಅವಕಾಶವಾಗಿದೆ.

ಭಾರತೀಯ ಉತ್ಪಾದನೆ ಮತ್ತು ಮೂಲಸೌಕರ್ಯ ಕಂಪನಿಗಳ ವ್ಯಾಪಾರ ಅಥವಾ ಯೋಜನಾ ಕಾರ್ಯಾಚರಣೆಗಳಲ್ಲಿ ಕೊಂಚ ಅಡ್ಡಿ ಮತ್ತು ಅನಿಶ್ಚಿತತೆ ಉಂಟಾಗಬಹುದು. ಮುಖ್ಯವಾಗಿ ಹೊಸದಾಗಿ ಹೂಡಿಕೆ ಮಾಡಲು ನಿರ್ಧರಿಸುವ ಭಾರತೀಯ ಕಂಪನಿಗಳು ಹೂಡಿಕೆಗಳನ್ನು ಮುಂದೂಡುವ ಅಥವಾ ವಿಳಂಬಗೊಳಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಅಕ್ಯೂಟ್ ರೇಟಿಂಗ್ಸ್ ಆಂಡ್ ರಿಸರ್ಚ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಮುಖ್ಯಸ್ಥ ಸುಮನ್ ಚೌಧರಿ.

Exit mobile version