Site icon Vistara News

Bangladesh Unrest: ಪ್ರತಿಭಟನೆಗೆ ಮಣಿದು ರಾಜೀನಾಮೆಗೆ ಮುಂದಾದ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಒಬೈದುಲ್ ಹಸನ್

Bangladesh Unrest

ಢಾಕಾ: ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಾದ್ಯಂತ (Bangladesh Unrest) ಗಲಭೆಯುತ್ತಿದ್ದು, ಈ ಮಧ್ಯೆ ಪ್ರತಿಭಟನಾಕಾರರ ಆಗ್ರಹದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ (Obaidul Hassan) ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ನಿಷ್ಠಾವಂತ ಎನಿಸಿಕೊಂಡಿರುವ ಒಬೈದುಲ್ ಹಸನ್‌ ಅವರನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಪ್ರತಿಭನಾಕಾರರು ಆಗಸ್ಟ್‌ 10ರ ಮಧ್ಯಾಹ್ನ 1 ಗಂಟೆಯೊಳಗೆ ರಾಜೀನಾಮೆಗೆ ನೀಡದಿದ್ದರೆ ನ್ಯಾಯಾಧೀಶರ ನಿವಾಸಗಳಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ.

ಹೊಸದಾಗಿ ರಚನೆಯಾದ ಮಧ್ಯಂತರ ಸರ್ಕಾರವನ್ನು ಸಂಪರ್ಕಿಸದೆ ಒಬೈದುಲ್ ಹಸನ್ ಅವರು ನ್ಯಾಯಾಲಯದ ಸಭೆ ಕರೆಯಲು ಮುಂದಾದ ಹಿನ್ನಲೆಯಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಇಂದು ಬೆಳಿಗ್ಗೆ 10:30ರ ವೇಳೆಗೆ ವಿದ್ಯಾರ್ಥಿಗಳು ಮತ್ತು ವಕೀಲರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ಹೊರಗೆ ಜಮಾಯಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮಧ್ಯಂತರ ಸರ್ಕಾರದಲ್ಲಿ ಯುವ ಮತ್ತು ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಮಾತನಾಡಿ ಮುಖ್ಯ ನ್ಯಾಯಮೂರ್ತಿ ಹಸನ್ ಅವರ ಬೇಷರತ್ತಾದ ರಾಜೀನಾಮೆಗೆ ಆಗ್ರಹಿಸಿದರು ಮತ್ತು ವಿವಾದಾತ್ಮಕ ನ್ಯಾಯಾಲಯದ ಸಭೆಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.

ಆಸಿಫ್ ಮಹಮೂದ್ ಹೇಳಿದ್ದೇನು?

“ವಿವಿಧ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಸರ್ಕಾರದೊಂದಿಗೆ ಯಾವುದೇ ಚರ್ಚೆ ನಡೆಸದೆ ಪೂರ್ಣ ನ್ಯಾಯಾಲಯದ ಸಭೆಯನ್ನು ಕರೆದಿದ್ದಾರೆ. ವಿದ್ಯಾರ್ಥಿಗಳು ಮತ್ತು ವಕೀಲರು ಈಗಾಗಲೇ ಪ್ರತಿಭಟನೆ ನಡೆಸಲು ಪ್ರಾರಂಭಿಸಿದ್ದಾರೆ” ಎಂದು ಈ ಮೊದಲು ಮಹಮೂದ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ವಿದ್ಯಾರ್ಥಿ ಚಳವಳಿಯ ಸಂಯೋಜಕ ಹಸ್ನತ್ ಅಬ್ದುಲ್ಲಾ ಅವರೂ ಎಚ್ಚರಿಕೆ ನೀಡಿ, ʼʼನಾವು ಈಗಾಗಲೇ ಮುಖ್ಯ ನ್ಯಾಯಮೂರ್ತಿಯ ರಾಜೀನಾಮೆಗೆ ಕರೆ ನೀಡಿದ್ದೆವು. ಅವರು ವಿದ್ಯಾರ್ಥಿಗಳ ವಿರುದ್ಧ ನಿಲುವು ತೆಗೆದುಕೊಂಡು ಅವರನ್ನು ಪ್ರಚೋದಿಸಿದರೆ, ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದರು.

ಹಿಂದೂಗಳ ಮೇಲೆ ದಾಳಿ

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 45 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್

Exit mobile version