Site icon Vistara News

Bangladesh Unrest: ಖ್ಯಾತ ಹಿಂದೂ ಗಾಯಕನ ಮನೆಯೂ ಧ್ವಂಸ; 3000 ಸಂಗೀತೋಪಕರಣಗಳು ಬೆಂಕಿಗಾಹುತಿ

Bangladesh unrest

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಭುಗಿಲೆದ್ದಿರುವ ದಂಗೆ(Bangladesh Unrest) ಯಲ್ಲಿ ಅಲ್ಪಸಂಖ್ಯಾತ ಹಿಂದೂ ದಿನೇ ದಿನೇ ನರಕಯಾತನೆ ಅನುಭವಿಸುವಂತಾಗಿದೆ. ಕಂಡ ಕಂಡಲ್ಲಿ ಹಿಂದೂಗಳನ್ನು, ಅವರಿಗೆ ಸಂಬಂಧಿಸಿದ ಮನೆ ಅಂಗಡಿಗಳನ್ನು ಮತ್ತು ದೇಗುಲಗಳನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ. ಕೈಗೆ ಸಿಕ್ಕವಸ್ತುಗಳನ್ನು ದೋಚುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ಖ್ಯಾತ ಗಾಯಕ(Bangladesh Singer)ನ ಮನೆಗೆ ಪ್ರತಿಭಟನಾಕಾರರು(Protester) ಬೆಂಕಿ ಇಟ್ಟಿರುವುದು ವರದಿಯಾಗಿದೆ.

ಬಾಂಗ್ಲಾದೇಶದ ಖ್ಯಾತ ಗಾಯಕ ರಾಹುಲ್ ಆನಂದ್(Rahul Anand) ಅವರ ಧಾಕಾದ ಧನ್ಮೋಂಡಿಯಲ್ಲಿದ್ದಂತಹ ಮನೆಯನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಗಾಯಕನ ಆಪ್ತ ಕುಟುಂಬಸ್ಥರು ಬಾಂಗ್ಲಾದೇಶದ ಪತ್ರಿಕೆಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಪ್ರತಿಭಟನಾಕಾರರು ಗೇಟ್ ಮುರಿದು ನಂತರ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಲಾರಂಭಿಸಿದ್ದರು.

3000 ಸಂಗೀತೋಪಕರಣಗಳು ಬೆಂಕಿಗಾಹುತಿ

ಇನ್ನು ದುಷ್ಕರ್ಮಿಗಳ ಹಚ್ಚಿದ ಬೆಂಕಿಗೆ ರಾಹುಲ್‌ ಆನಂದ್‌ ಅವರ ಮನೆಯಲ್ಲಿದ್ದ 3000ಕ್ಕೂ ಅಧಿಕ ಸಂಗೀತೋಪಕರಣಗಳು ಬೆಂಕಿಗಾಹುತಿಯಾಗಿವೆ. ಇನ್ನು ಕಿಡಿಗೇಡಿಗಳು ರಾಹುಲ್‌ ಆನಂದ್‌ ಮನೆಯಲ್ಲಿದ್ದ ಪೀಠೋಪಕರಣಗಳು, ಕನ್ನಡಿಗಳು ಸೇರಿದಂತೆ ಮನೆಯಲ್ಲಿದ್ದಂತಹ ದುಬಾರಿ ವಸ್ತುಗಳನ್ನೆಲ್ಲ ಕೊಂಡೊಯ್ದಿದ್ದಾರೆ. ಈ ಮನೆಯು ಸುಮಾರು 140 ವರ್ಷ ಹಳೆಯದ್ದಾಗಿತ್ತು. ರಾಹುಲ್ ಆನಂದ್ ಅವರು ಜಾನಪದ ಬ್ಯಾಂಡ್ ನಡೆಸುತ್ತಿದ್ದು ಇದಕ್ಕೆ ಜೋಲರ್ ಗಾನ್ ಎಂದು ಹೆಸರಿಟ್ಟಿದ್ದರು. ಇದೀಗ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಡೀ ಪರಂಪರೆಯೇ ನಾಶವಾಗಿದೆ.

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್‌ ಹಸೀನಾ(Sheikh Hasina) ದೇಶದಿಂದ ಪಲಾಯಣ ಮಾಡಿರುವ ಬೆನ್ನಲ್ಲೇ ಹಿಂದೂಗಳನ್ನು ಗುರಿಯಾಗಿ ಎಗ್ಗಿಲ್ಲದೇ ದಾಳಿ ನಡೆಯುತ್ತಿದೆ. ಸಾಲದೆನ್ನುವಂತೆ ಉದ್ರಿಕ್ತ ಪ್ರತಿಭಟನಾಕಾರರು ಹಿಂದೂ ದೇಗುಲಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ.

ಬಾಂಗ್ಲಾದೇಶದ ಪತ್ರಿಕೆಗಳ ವರದಿ ಪ್ರಕಾರ 27 ಜಿಲ್ಲೆಗಳಲ್ಲಿ ಹಿಂದೂಗಳ ವ್ಯಾಪಾರ ಮಳಿಗೆ ಮತ್ತು ಮನೆಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇನ್ನು ಜಮಾತ್‌-ಎ- ಇಸ್ಲಾಮಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದನ್ನು ಒಪ್ಪಿಕೊಂಡಿದೆ.

ಇದನ್ನೂ ಓದಿ: Shehzad Poonawalla: ಬಾಂಗ್ಲಾದಂತೆ ಭಾರತದಲ್ಲಿಯೂ ಹಿಂಸಾಚಾರ; ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ ಹೇಳಿಕೆಗೆ ಬಿಜೆಪಿ ಕಿಡಿ

Exit mobile version