Site icon Vistara News

Bangladesh Unrest: ಭಾರತದಲ್ಲೂ ಬಾಂಗ್ಲಾ ಮಾದರಿ ಗಲಭೆಗೆ ಸಂಚು; ಪಾಕ್‌ ಮಾಜಿ ಕ್ರಿಕೆಟಿಗನ ಸ್ಫೋಟಕ ಮಾಹಿತಿ

Bangladesh Unrest

ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ (Bangladesh Unrest)ದ ಮಧ್ಯೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ (Danish Kaneria) ಅವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿಯೂ ಬಾಂಗ್ಲಾದೇಶದಂತಹ ಸನ್ನಿವೇಶ ಸೃಷ್ಟಿಸುವ ಜನರಿದ್ದುಮ ಅವರ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಐಎಸ್ಐ ಇದೆ ಎನ್ನಲಾಗುತ್ತಿದೆ. ಪ್ರಧಾನಿ ಶೇಖ್ ಹಸೀನಾ ಅವರ ಮಗ ಕೂಡ ಐಎಸ್ಐ ಪಾತ್ರದ ಬಗ್ಗೆ ಸಂದೇಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾನಿಶ್ ಕನೇರಿಯಾ ಭಾರತಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬರೆದುಕೊಂಡಿರುವ ದಾನಿಶ್ ಕನೇರಿಯಾ, “ಭಾರತ ಜಾಗರೂಕವಾಗಿರಬೇಕು: ನಿಮ್ಮ ರಾಷ್ಟ್ರದೊಳಗಿನ ಕೆಲವರು ಬಾಂಗ್ಲಾದೇಶದಂತಹ ಸನ್ನಿವೇಶ ಸೃಷ್ಟಿಯಾಗಲು ಬಯಸುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ದೇಶದಲ್ಲಿ ಅಶಾಂತಿಯನ್ನು ಪ್ರಚೋದಿಸಲು ಪ್ರಯತ್ನಿಸುವವರ ವಿರುದ್ಧ ಜಾಗರೂಕರಾಗಿರಿ” ಎಂದು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಸದ್ಯ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ದೇವಾಲಯಗಳ ಮೇಲೆ ಆಕ್ರಮಣ ಮಾಡುತ್ತಿರುವ ಆತಂಕಕಾರಿ ವಿಡಿಯೊ ಹೊರ ಬರುತ್ತಿರುವ ಮಧ್ಯೆ ದಾನಿಶ್ ಕನೇರಿಯಾ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಸಹಾಯ ಮಾಡಲು ಭಾರತದ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

“ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸಲು ತಕ್ಷಣ ಮಧ್ಯ ಪ್ರವೇಶಿಸುವಂತೆ ನಾನು ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ನಾವು ನಮ್ಮ ಸಹೋದರ ಸಹೋದರಿಯರನ್ನು ಉಗ್ರಗಾಮಿಗಳಿಗೆ ಬಿಟ್ಟು ಕೊಡಬಾರದು. #SaveBangladeshiHindus” ಎಂದು ಅವರು ಮನವಿ ಮಾಡಿದ್ದಾರೆ.

ಬಾಂಗ್ಲಾದೇಶದ ಡೈಲಿ ಸ್ಟಾರ್ ವರದಿಯ ಪ್ರಕಾರ, ಕನಿಷ್ಠ 27 ಜಿಲ್ಲೆಗಳಲ್ಲಿನ ಹಿಂದೂಗಳ ಮನೆ ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಪ್ರತಿಭಟನಾಕಾರರ ಗುಂಪುಗಳು ದಾಳಿ ನಡೆಸಿವೆ ಮತ್ತು ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದೆ. ಬಾಂಗ್ಲಾದೇಶದ ಖುಲ್ನಾ ವಿಭಾಗದಲ್ಲಿರುವ ಮೆಹರ್ಪುರದ ಇಸ್ಕಾನ್ ದೇವಾಲಯ ಮತ್ತು ಕಾಳಿ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ. “ಮೆಹರ್ಪುರದಲ್ಲಿರುವ ನಮ್ಮ ಇಸ್ಕಾನ್ ಕೇಂದ್ರವನ್ನು ಉದ್ರಿಕ್ತರ ಗುಂಪು ಸುಟ್ಟು ಹಾಕಿದೆ. ಇದರಲ್ಲಿ ಭಗವಾನ್ ಜಗನ್ನಾಥ, ಬಲದೇವ್ ಮತ್ತು ಸುಭದ್ರಾ ದೇವಿಯ ವಿಗ್ರಹಗಳೂ ಇದ್ದವು. ಈ ವೇಳೆ ಇಲ್ಲಿದ್ದ ಮೂವರು ಭಕ್ತರು ಹೇಗೋ ತಪ್ಪಿಸಿಕೊಂಡಿದ್ದಾರೆ” ಎಂದು ಇಸ್ಕಾನ್ ವಕ್ತಾರ ಯುಧಿಷ್ಠಿರ ಗೋವಿಂದ ದಾಸ್ ತಿಳಿಸಿದ್ದಾರೆ.

ಆಲ್‌ ಐಸ್‌ ಆನ್‌ ಬಾಂಗ್ಲಾದೇಶ್‌ ಹಿಂದೂಸ್‌ ಅಭಿಯಾನ

ಬಾಂಗ್ಲಾದೇಶದಲ್ಲಿ ಹಿಂದೂಗಳು ಸಂಕಷ್ಟಕ್ಕೆ ಒಳಗಾಗಿರುವ ನಡುವೆ ಆಲ್‌ ಐಸ್‌ ಆನ್‌ ಬಾಂಗ್ಲಾದೇಶ್‌ ಹಿಂದೂಸ್‌ (All eyes on Bangladesh Hindus) ಎಂಬ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಆಗುತ್ತಿದೆ. ಬಾಂಗ್ಲಾದೇಶದ ಹಿಂದೂಗಳು ಮತ್ತು ದೇವಾಲಯಗಳ ಮೇಲಿನ ದಾಳಿಯ ಬಗ್ಗೆ ಮೌನವಾಗಿರುವುದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳನ್ನು ನೆಟ್ಟಿಗರು ಟೀಕಿಸುತ್ತಿರುವ ಪರಿಕಲ್ಪನೆ ‘ಎಲ್ಲ ಕಣ್ಣುಗಳು ಬಾಂಗ್ಲಾದೇಶ ಹಿಂದೂಗಳ ಮೇಲೆ’ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ.  ಕೆಲವು ತಿಂಗಳುಗಳ ಹಿಂದೆ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ಅನೇಕರು ಇನ್‌ಸ್ಟಾಗ್ರಾಮ್‌ನಲ್ಲಿ ‘ಆಲ್ ಐಸ್ ಆನ್ ರಫಾ’ ಘೋಷಣೆಯೊಂದಿಗೆ ಹಂಚಿಕೊಂಡಿದ್ದರು. ಈ ಪೈಕಿ ಬಾಲಿವುಡ್‌ ತಾರೆಯರೂ ಇದ್ದರು.

ಇದನ್ನೂ ಓದಿ: Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

ಇದೀಗ ಬಾಂಗ್ಲಾದಲ್ಲಿ ಹಿಂದೂಗಳ ಮನೆ ಮನೆಗೆ ನುಗ್ಗಿ ಕಿಡಿಗೇಡಿಗಳು ದಾಂಧಲೆ ಎಬ್ಬಿಸುತ್ತಿದ್ದರೂ, ಯಾರೊಬ್ಬರೂ ತುಟಿಕ್‌ ಪಿಟಿಕ್‌ ಅನ್ನದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ. ಸಿನಿತಾರೆಯರ ಏಕಪಕ್ಷೀಯ ನಡೆಗೆ ಹಲವು ಟೀಕೆ ವ್ಯಕ್ತಪಡಿಸಿದ್ದಾರೆ.

Exit mobile version