Site icon Vistara News

Bangladesh Violence: ಭಾರೀ ಪ್ರೊಟೆಸ್ಟ್‌; ಜೈಲಿಗೆ ಬೆಂಕಿ; ನೂರಾರು ಕೈದಿಗಳು ಪರಾರಿ

Bangladesh Violence

ಢಾಕಾ: ಉದ್ಯೋಗ ಮೀಸಲಾತಿ(Job Reservation) ವಿಚಾರವಾಗಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ(Bangladesh Violence) ದಿನೇ ದಿನೇ ಹೆಚ್ಚಾಗುತ್ತಿದೆ. ಉದ್ರಿಕ್ತ ಪ್ರತಿಭಟನಾಕಾರರು ಜೈಲಿಗೆ ಬೆಂಕಿ ಹಚ್ಚಿದ್ದು, ಇದಕ್ಕೂ ಮುನ್ನ ನೂರಾರು ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡು ಓಡಿದ್ದಾರೆ. ನರ್ಸಿಂಗಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಉದ್ರಿಕ್ತರ ಗುಂಪು ಈ ಕೃತ್ಯ ಎಸಗಿದೆ ಎನ್ನಲಾಗಿದೆ.

ಪೊಲೀಸ್‌ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಜೈಲಿನೆದುರು ಪ್ರತಿಭಟನೆ ಮಾಡುತ್ತಿದ್ದವರು ಏಕಾಏಕಿ ಉದ್ರಿಕ್ತರಾಗಿ ಜೈಲಿನೊಳಗೆ ನುಗ್ಗಿದ್ದಾರೆ. ಇದರಿಂದಾಗಿ ನೂರಾರು ಕೈದಿಗಳು ಬಹಳ ಸುಲಭವಾಗಿ ಜೈಲಿನಿಂದ ಓಡಿ ಹೋಗಿದ್ದಾರೆ. ಇದಾದ ಬಳಿಕ ಪ್ರತಿಭಟನಾಕಾರರು ಜೈಲಿಗೆ ಬೆಂಕಿ ಹಚ್ಚಿದ್ದಾರೆ. ಇನ್ನು ದೇಶಾದ್ಯಂತ ಭುಗಿಲೆದ್ದಿರುವ ಹಿಂಸಾಚಾರದಿಂದಾಗಿ ಇದುವರೆಗೂ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅನೇಕ ದಿನಗಳಿಂದ ಪ್ರತಿಭಟನಾಕಾರರು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತ ಪಕ್ಷವಾದ ಅವಾಮಿ ಲೀಗ್ನ ವಿದ್ಯಾರ್ಥಿ ಘಟಕದ ಸದಸ್ಯರೊಂದಿಗೆ ವಿದ್ಯಾರ್ಥಿಗಳು ಘರ್ಷಣೆ ನಡೆಸಿದ್ದರಿಂದ 35ಮಂದಿ ಸಾವನ್ನಪ್ಪಿದ್ದಾರೆ. ಬ್ರಾಕ್ ವಿಶ್ವವಿದ್ಯಾನಿಲಯದ ಬಳಿಯ ಮೆರುಲ್ ಬಡ್ಡಾದಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆಗಳು ನಡೆದಿವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಜೂನ್ 5 ರಂದು, ಬಾಂಗ್ಲಾದೇಶ ಹೈಕೋರ್ಟ್ 1971 ರ ಪಾಕಿಸ್ತಾನದಿಂದ ಸ್ವಾತಂತ್ರ್ಯದ ಯುದ್ಧದಲ್ಲಿ ಹೋರಾಡಿದವರ ಕುಟುಂಬಗಳಿಗೆ ಶೇ. 30 ಮೀಸಲಾತಿಯನ್ನು ಘೋಷಿಸಿತ್ತು. ಇದನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೇತೃತ್ವದ ಬೃಹತ್ ಆಂದೋಲನದ ನಂತರ 2018 ರಲ್ಲಿ ರದ್ದುಗೊಳಿಸಲಾಗಿತ್ತು. ತಾರತಮ್ಯದ ಮೀಸಲಾತಿಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ವಲಯದ ಉದ್ಯೋಗಗಳ ಕೊರತೆಯು ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ಹೆಚ್ಚು ಲಾಭದಾಯಕವಾಗಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಸ್ತುತ, ಬಾಂಗ್ಲಾದೇಶದಲ್ಲಿ 170 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 32 ಮಿಲಿಯನ್ ಯುವಜನರು ಉದ್ಯೋಗದಲ್ಲಿ ಇಲ್ಲ. ಆರ್ಥಿಕ ಸವಾಲುಗಳು ನಿಶ್ಚಲತೆ, ಸುಮಾರು 10% ಹಣದುಬ್ಬರ ಮತ್ತು ಕುಗ್ಗುತ್ತಿರುವ ಹಣದ ಮೌಲ್ಯ ಯುವಜನತೆಯನ್ನು ನಿರಾಶರನ್ನಾಗಿಸಿದೆ. ಕಳೆದ ತಿಂಗಳು ಆರಂಭವಾದ ಪ್ರತಿಭಟನೆಗಳು, ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಲು ಪ್ರಧಾನಿ ಶೇಖ್ ಹಸೀನಾ ನಿರಾಕರಿಸಿದ ನಂತರ ತೀವ್ರಗೊಂಡವು

ಇದನ್ನೂ ಓದಿ: Microsoft Windows Outage: ಮೈಕ್ರೊಸಾಫ್ಟ್​​ ಸಮಸ್ಯೆ ; ಬೆಂಗಳೂರು ಸೇರಿದಂತೆ ದೇಶದ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲಕಲ್ಲೋಲ

Exit mobile version