Site icon Vistara News

ಭೂತಾನ್‌ನಲ್ಲೂ ಮೋದಿ ಹವಾ; 45 ಕಿ.ಮೀ ಸಾಲುಗಟ್ಟಿ ನಿಂತು ಸ್ವಾಗತಿಸಿದ ಜನ

Modi In Bhutan

Bhutanese people throng 45km stretch to welcome PM Narendra Modi in Thimphu

ಥಿಂಪು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶ್ವದ ಯಾವುದೇ ರಾಷ್ಟ್ರಕ್ಕೆ ಹೋದರೂ ಅದ್ಧೂರಿ ಸ್ವಾಗತ ದೊರೆಯುತ್ತದೆ. ಅದರಲ್ಲೂ, ಅನಿವಾಸಿ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ನೆರೆದು, ಜೈಕಾರ ಕೂಗಿ ಮೋದಿ ಅವರನ್ನು ಸ್ವಾಗತಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಎರಡು ದಿನಗಳ ಭೇಟಿಗಾಗಿ ಭೂತಾನ್‌ಗೆ (Bhutan) ತೆರಳಿರುವ ನರೇಂದ್ರ ಮೋದಿ (Modi Bhutan Visit) ಅವರಿಗೆ ಅಲ್ಲಿನ ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಅಷ್ಟೇ ಅಲ್ಲ, ಸುಮಾರು 45 ಕಿಲೋಮೀಟರ್‌ವರೆಗೆ ಜನ ಸಾಲಾಗಿ ನಿಂತು ಮೋದಿ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿದೆ.

ಹೌದು, ಭೂತಾನ್‌ನ ಪಾರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ಥಿಂಪುವರೆಗಿನ 45 ಕಿಲೋಮೀಟರ್‌ ಮಾರ್ಗದುದ್ದಕ್ಕೂ ನಿಂತ ಜನ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ದೇಶಕ್ಕೆ ಸ್ವಾಗತಿಸಿದರು. ಸುಮಾರು 45 ಕಿಲೋಮೀಟರ್‌ ಮಾರ್ಗವನ್ನು ಮೋದಿ ಅವರು ಕಾರಿನಲ್ಲಿಯೇ ಸಂಚರಿಸಿದ್ದರು. ಮಾರ್ಗದುದ್ದಕ್ಕೂ ನಿಂತಿದ್ದ ಜನ ಹೂಮಳೆ ಸುರಿಸಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಇದಕ್ಕೂ ಮೊದಲು ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೊಬ್ಗೆ ಅವರು ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಇದಾದ ಬಳಿಕ ಮೋದಿ ಅವರು ಗೌರವವಂದನೆ ಸ್ವೀಕರಿಸಿದರು.

ಭೇಟಿ ವೇಳೆ ಮೋದಿ ಅವರು ಭೂತಾನ್‌ ಪ್ರದಾನಿ ತ್ಶೆರಿಂಗ್‌ ತೊಬ್ಗೆ ಅವರ ಜತೆ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಭಾರತ ಹಾಗೂ ಭೂತಾನ್‌ ನಡುವಿನ ಸಂಬಂಧ ವೃದ್ಧಿ, ವ್ಯಾಪಾರ ಒಪ್ಪಂದಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಪರಸ್ಪರ ಆರ್ಥಿಕ ಸಹಕಾರ, ಸಂಪರ್ಕ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 2019ರಲ್ಲಿ ಕೊನೆಯ ಬಾರಿ ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Modi Bhutan Visit: ಭೂತಾನ್‌ಗೆ ತೆರಳಿದ ಪ್ರಧಾನಿ ಮೋದಿ; ಇಷ್ಟೆಲ್ಲ ಇದೆ ನಿರೀಕ್ಷೆ

ನರೇಂದ್ರ ಮೋದಿ ಅವರು ಮಾರ್ಚ್‌ 21 ಹಾಗೂ ಮಾರ್ಚ್‌ 22ರಂದು ಭೂತಾನ್‌ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಪಾರೋ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯ ಉಂಟಾದ ಕಾರಣ ಮೋದಿ ಭೂತಾನ್‌ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು. ಇದಾದ ಬಳಿಕ ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ನಡೆಸಿ ಮಾರ್ಚ್‌ 22 ಹಾಗೂ 23ರಂದು ಪ್ರವಾಸ ನಿಗದಿಪಡಿಸಿದರು ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version