ನಾಪತ್ತೆಯಾಗಿದ್ದ 2ವರ್ಷದ ಮಗುವೊಂದು ಬಳಿಕ ಮೊಸಳೆಯ ಬಾಯಿಯಲ್ಲಿ ಮೃತದೇಹವಾಗಿ ಪತ್ತೆಯಾದ ಭಯಾನಕ ಘಟನೆ ಯುಎಸ್ನ ಫ್ಲೋರಿಡಾದಲ್ಲಿ ನಡೆದಿದೆ. ಈ ಪುಟಾಣಿ ಬಾಲಕನ ಹೆಸರು ಟೇಲೆನ್ ಮೊಸ್ಲಿ. ಇವನ ಅಮ್ಮ ಪೆಶುನ್ ಜೆಫ್ರಿ ಗುರುವಾರ ಮೃತಪಟ್ಟಿದ್ದಳು. ಆಕೆಯ ಶವ ಅಪಾರ್ಟ್ಮೆಂಟ್ನ ಮನೆಯಲ್ಲಿ ಪತ್ತೆಯಾಗಿತ್ತು. ಮೈಮೇಲೆಲ್ಲ ಚಾಕುವಿನಿಂದ ಚುಚ್ಚಿದ ಗಾಯಗಳಿದ್ದವು. ಪೊಲೀಸರು ಅಲ್ಲಿಗೆ ಹೋಗುವಷ್ಟರಲ್ಲಿಯೇ ಮಗು ನಾಪತ್ತೆಯಾಗಿತ್ತು. ಹುಡುಕಾಟ ನಡೆಸಿದ ಬಳಿಕ ಟೇಲೆನ್ ಮೊಸ್ಲಿ ಶವ ಮೊಸಳೆಯ ಬಾಯಲ್ಲಿ ಸಿಕ್ಕಿದೆ ಎಂದು ಸೇಂಟ್ ಪೀಟರ್ಸ್ಬರ್ಗ್ ಪೊಲೀಸ್ ಮುಖ್ಯಸ್ಥ ಅಂಥೋನಿ ಹ್ಯಾಲೋವೆ ಮಾಹಿತಿ ನೀಡಿದ್ದಾರೆ. ಪುಟ್ಟ ಬಾಲಕನ ತಂದೆ ಥಾಮಸ್ ಮೊಸ್ಲಿಯೇ ಆರೋಪಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಸೇಂಟ್ ಪೀಟರ್ಸ್ಬರ್ಗ್ ಪೊಲೀಸ್ ಡಿಪಾರ್ಟ್ಮೆಂಟ್ನ ಫೇಸ್ಬುಕ್ ಪೇಜ್ನಲ್ಲಿ ಬರೆಯಲಾಗಿದೆ.
20ವರ್ಷದ ಮಹಿಳೆ ಪೆಶುನ್ ಜೆಫ್ರಿ ಶವ ಪತ್ತೆಯಾಗುತ್ತಿದ್ದಂತೆ ಮಗುವಿಗಾಗಿ ಎಲ್ಲೆಡೆ ಹುಡಕಾಟ ನಡೆಸಲಾಗಿತ್ತು. ಅದಾದ ಮೇಲೆ ಏಪ್ರಿಲ್ 1ರಂದು ಬಾಲಕ ಟೇಲೆನ್ ಮೊಸ್ಲಿ ಶವ ಮ್ಯಾಗಿಯೋರ್ ಎಂಬ ಸರೋವರದ ಬಳಿ ಮೊಸಳೆಯೊಂದರ ಬಾಯಲ್ಲಿ ಪತ್ತೆಯಾಗಿದೆ. ಈ ಸರೋವರ ಅಪಾರ್ಟ್ಮೆಂಟ್ಗಿಂತ ಸ್ವಲ್ಪವೇ ದೂರದಲ್ಲಿದೆ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಮನಕಲಕುವ ಸುದ್ದಿ ಇದು; ಬೋಟ್ ಕಟ್ಟುತ್ತಿದ್ದ ಅಪ್ಪನ ಎದುರೇ 1 ವರ್ಷದ ಮಗುವನ್ನು ಎಳೆದೊಯ್ದು, ನುಂಗಿದ ಮೊಸಳೆ
‘ಅಪಾರ್ಟ್ಮೆಂಟ್ ಸುತ್ತಲೂ ಹುಡುಕಾಟ ನಡೆಸಲಾಯಿತು. ಅದಾದ ಹೀಗೆ ಹುಡುಕುತ್ತ ಸರೋವರದ ಬಳಿ ಹೋದಾಗ ಅಲ್ಲೊಂದು ಮೊಸಳೆ ಸುಮ್ಮನೆ ಮಲಗಿತ್ತು ಮತ್ತು ಅದರ ಬಾಯಲ್ಲಿ ಏನೋ ಇದ್ದಂತೆ ಭಾಸವಾಗುತ್ತಿತ್ತು. ಹೀಗಾಗಿ ನಮ್ಮಲ್ಲೊಬ್ಬರು ಸಿಬ್ಬಂದಿ ಮೊಸಳೆಗೆ ಗುಂಡು ಹಾರಿಸಿದರು. ಆಗ ಅದು ತನ್ನ ಬಾಯಿ ತೆರೆದು, ಬಾಯಲ್ಲಿದ್ದುದನ್ನು ಹೊರಗೆ ಉಗುಳಿತು. ನೋಡಿದರೆ ಅದು ಟೇಲೆನ್ ಮೊಸ್ಲಿ ಶವವಾಗಿತ್ತು’ ಎಂದು ಪೊಲೀಸ್ ಮುಖ್ಯಸ್ಥ ಅಂಥೋನಿ ಹ್ಯಾಲೋವೆ ತಿಳಿಸಿದ್ದಾರೆ. ‘ನಾವು ಆತ ಜೀವಂತವಾಗಿಯೇ ಸಿಗುತ್ತಾನೆ ಎಂಬ ಆಶಯದಿಂದ ಹುಡುಕುತ್ತಿದ್ದೆವು. ಅದರಲ್ಲೂ ಈ ರೀತಿ ಭಯಾನಕ ಸಾವನ್ನು ನಿರೀಕ್ಷೆ ಮಾಡಿರಲಿಲ್ಲ. ತುಂಬ ನೋವಾಯಿತು ಮಗುವನ್ನು ನೋಡಿ. ಕಣ್ಣಲ್ಲಿ ನೀರು ಜಿನುಗಿತು’ ಎಂದು ಅವರು ನೊಂದುಕೊಂಡು ಹೇಳಿದ್ದಾರೆ.
ಇವರಿಬ್ಬರ ಸಾವಿನಲ್ಲೂ ಥಾಮಸ್ ಮೊಸ್ಲಿ (ಬಾಲಕನ ತಂದೆ)ಯ ಕೈವಾಡವಿದೆ ಎಂದು ಸಾಬೀತಾಗಿದೆ. ಆದರೆ ಅವನನ್ನು ನಾವು ಸಂಧಿಸಿದಾಗ ಅವನು ಕೈ ಮತ್ತು ಕಾಲುಗಳ ಮೇಲೆಲ್ಲ ಚಾಕುವಿನಿಂದ ಗಾಯಮಾಡಿಕೊಂಡ ಸ್ಥಿತಿಯಲ್ಲಿದ್ದ. ಶುಕ್ರವಾರ ಅವನನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಪಿನೆಲ್ಲಾಸ್ ಕೌಂಟಿ ಜೈಲಿನಲ್ಲಿ ಇಡಲಾಗಿದೆ. ವಕೀಲರನ್ನು ಭೇಟಿಯಾಗಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದ. ಜೈಲು ಆಡಳಿತ ಅದಕ್ಕೆ ಅವಕಾಶ ಮಾಡಿಕೊಟ್ಟಿದೆಯೋ, ಇಲ್ಲವೋ ಗೊತ್ತಾಗಲಿಲ್ಲ ಎಂದು ಪೊಲೀಸ್ ಮುಖ್ಯಸ್ಥ ಅಂಥೋನಿ ಹ್ಯಾಲೋವೆ ಹೇಳಿದ್ದಾರೆ.