ಬ್ರೆಜಿಲ್ನಲ್ಲಿ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ದೊಡ್ಡಮಟ್ಟದಲ್ಲಿ ದಂಗೆ ನಡೆಸುತ್ತಿದ್ದಾರೆ. ಬಲಪಂಥೀಯರಾಗಿದ್ದ ಜೈರ್ ಬೋಲ್ಸನಾರೋ ಅವರು 2019ರಿಂದ 2022ರವರೆಗೆ ಬ್ರೆಜಿಲ್ ಅಧ್ಯಕ್ಷರಾಗಿದ್ದರು. ಈ ಸಲದ ಚುನಾವಣೆಯಲ್ಲಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ವಿರುದ್ಧ ಸೋತಿದ್ದಾರೆ. 2023ರ ಜನವರಿ 1ರಂದು ಲೂಯಿಜ್ ಇನಾಸಿಯೊ ಅವರು ಬ್ರೆಜಿಲ್ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನವನ್ನೂ ಸ್ವೀಕಾರ ಮಾಡಿದ್ದಾರೆ. ಆದರೆ ಎಡಪಂಥೀಯರಾಗಿರುವ ಲೂಯಿಜ್ ಆಡಳಿತವನ್ನು ಮತ್ತು ಜೈರ್ ಬೋಲ್ಸನಾರೋ ಅವರ ಸೋಲನ್ನು ಒಪ್ಪಿಕೊಳ್ಳಲು ಅವರ ಬೆಂಬಲಿಗರು ಸಿದ್ಧರಿಲ್ಲ. ತತ್ಪರಿಣಾಮ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಜೈರ್ ಬೋಲ್ಸನಾರೋ ಅವರ ಸುಮಾರು 3000 ಬೆಂಬಲಿಗರು ಹಸಿರು-ಹಳದಿ ಬಣ್ಣದ ಉಡುಪು ಧರಿಸಿ, ಕೈಯಲ್ಲಿ ಲಿಬರಲ್ ಪಾರ್ಟಿ ಬಾವುಟ ಹಿಡಿದು ಬ್ರೆಜಿಲ್ ಸಂಸತ್ ಭವನ, ಅಧ್ಯಕ್ಷರ ಭವನ ಮತ್ತು ಸುಪ್ರೀಂಕೋರ್ಟ್ಗೆ ನುಗ್ಗಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಸರ್ಕಾರಿ ಭವನಗಳನ್ನು ಹಾನಿಗೊಳಿಸುತ್ತಿದ್ದಾರೆ. ಈವರೆಗೆ ಪೊಲೀಸರು ಸುಮಾರು 300 ಪ್ರತಿಭಟನಾಕಾರರನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ. ಪ್ರತಿಭಟನಾಕಾರರ ನಿಯಂತ್ರಣಕ್ಕೆ ಬ್ರೆಜಿಲ್ ಸೇನಾ ಸಿಬ್ಬಂದಿ ಆಗಮಿಸಿದ್ದಾರೆ. ಅಶ್ರುವಾಯು ಪ್ರಯೋಗ ನಿರಂತರವಾಗಿ ನಡೆಯುತ್ತಿದೆ.
ಇನ್ನು ಈ ದಂಗೆಯನ್ನು ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೋ ಅವರೂ ಖಂಡಿಸಿದ್ದಾರೆ. ಹಾಗೇ, ಈಗಿನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸುದ್ದಿಗೋಷ್ಠಿ ನಡೆಸಿ, ಜೈರ್ ಬೋಲ್ಸನಾರೋ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಮುಖ ಸರ್ಕಾರಿ ಭವನಗಳ ಭದ್ರತೆಗೇ ದಕ್ಕೆ ಎದುರಾಗಿದೆ ಎಂದು ಹೇಳಿದ್ದಾರೆ. ಹಾಗೇ, ನಿಯೋಜಿಸಲಾದ ಸೇನಾ ಸಿಬ್ಬಂದಿಯನ್ನು ಜನವರಿ 31ರವರೆಗೂ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಬ್ರೆಜಿಲ್ ದಂಗೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಖಂಡಿಸಿದ್ದಾರೆ. ಬ್ರೆಜಿಲ್ನಲ್ಲಿ ಕಾನೂನುಬದ್ಧವಾಗಿಯೇ ಚುನಾವಣೆ ನಡೆದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಆಗಿದೆ. ಇಷ್ಟಾದ ಮೇಲೆ ಹೀಗೆ ದಂಗೆ-ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಮಾಡಿದಂತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Lanka on fire: ಜು. 13ರಂದು ರಾಜಪಕ್ಸ ಪದತ್ಯಾಗ, ಉಗ್ರ ಪ್ರತಿಭಟನೆ ಬಳಿಕ ಈಗ ಸಂಭ್ರಮಾಚರಣೆ