Site icon Vistara News

Israel Palestine War: ಹಮಾಸ್ ರಾಜಕೀಯ ಮುಖ್ಯಸ್ಥನ ಮನೆ ಮೇಲೆ ಬಾಂಬ್ ದಾಳಿ!

Bomb attack on the house of the political head of Hamas and Israel Palestine War

ನವದೆಹಲಿ: ಗಾಜಾಪಟ್ಟಿಯಲ್ಲಿ (Gaza Strip) ಹಮಾಸ್ (Hamas) ಮತ್ತು ಇಸ್ರೇಲ್ (Israel) ನಡುವಿನ ಕಾಳಗವು ತೀವ್ರವಾಗಿದೆ. ಇಸ್ರೇಲ್ ಪಡೆಗಳು ಗಾಜಾದಲ್ಲಿರುವ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ (Hamas Political Chief Ismail Haniyeh) ಅವರ ಮನೆಯ ಮೇಲೆ ದಾಳಿ ನಡೆಸಿವೆ ಎಂದು ವರದಿಯಾಗಿದೆ. ಇಸ್ರೇಲಿ ಫೈಟರ್ ಜೆಟ್‌ಗಳು, ಮನೆಯ ಮೇಲೆ ಬಾಂಬ್ ಸ್ಫೋಟಿಸುವ ವೀಡಿಯೊವನ್ನು ಹಂಚಿಕೊಂಡಿದ್ದು, ಅದು ಇಸ್ಮಾಯಿಲ್ ಹನಿಯೆಹ್ ಅವರ ಮನೆ ಎಂದು ಹೇಳಿಕೊಂಡಿವೆ(Israel Palestine War).

ಹನಿಯೆಹ್ ಅವರು ಹಮಾಸ್ ರಾಜಕೀಯ ಘಟಕದ ಮುಖ್ಯಸ್ಥರಾಗಿದ್ದಾರೆ ಮತ್ತು ಗಾಜಾ ಆಡಳಿತ ನಡೆಸುತ್ತಿರುವ ಸಂಘಟನೆಯಲ್ಲಿ ಉನ್ನತ ರ್ಯಾಂಕಿಂಗ್ ಹೊಂದಿದ್ದಾರೆ. ಬಹಳಷ್ಟು ದೇಶಗಳು ಹನಿಯೆಹ್ ಅವರನ್ನು ಹಮಾಸ್ ಮುಖ್ಯಸ್ಥ ಎಂದು ಪರಿಗಣಿಸಿವೆ.

ಹನಿಯೆಹ್ ಅವರ ಮನೆಯನ್ನು ಭಯೋತ್ಪಾದಕರ ಮೂಲಸೌಕರ್ಯದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇಸ್ರೇಲಿ ನಾಗರಿಕರು ಮತ್ತು ಇಸ್ರೇಲಿ ರಕ್ಷಣಾ ಪಡೆಗಳ ಮೇಲಿನ ದಾಳಿ ರೂಪಿಸಲು ಈ ಮನೆಯಲ್ಲಿ ಹಮಾಸ್ ನಾಯಕರು ಯೋಜನೆಗಳನ್ನು ರೂಪಿಸುತ್ತಿದ್ದರು ಎಂದ ಇಸ್ರೇಲ್ ಹೇಳಿಕೊಂಡಿದೆ.

2006ರಲ್ಲಿ ಗಾಜಾಪಟ್ಟಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ಯಾಲೆಸ್ತೀನ್‌ನ ಪ್ರಧಾನಿಯನ್ನಾಗಿ ಹನಿಯೆಹ್ ಅವರನ್ನು ನೇಮಕ ಮಾಡಲಾಗಿತ್ತು. ಹನಿಯೆಹ್ ಅವರನ್ನು 2017 ರಲ್ಲಿ ಹಮಾಸ್ ನಾಯಕರಾಗಿ ಆಯ್ಕೆ ಮಾಡಲಾಯಿತು ಮತ್ತು ಗಾಜಾದ ಹೊರಗಿನಿಂದ ಅವರ ಗುಂಪಿನ ರಾಜಕೀಯ ಚಟುವಟಿಕೆಗಳನ್ನು ಹೆಚ್ಚಾಗಿ ನಿಯಂತ್ರಿಸಿದ್ದರು.

ಇಸ್ರೇಲಿ ಪಡೆಗಳು ಇಂದು ಡೈವಿಂಗ್ ಗೇರ್, ಸ್ಫೋಟಕ ಸಾಧನಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ ಹಮಾಸ್ ನೌಕಾ ಪಡೆಗಳ ಶಸ್ತ್ರಾಸ್ತ್ರ ಸಂಗ್ರಹವನ್ನು ಪತ್ತೆ ಮಾಡಿ ನಾಶಪಡಿಸಿವೆ. ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಇಸ್ರೇಲ್ ಮೇಲಿನ ದಾಳಿ ವೇಳೆ ಹಮಾಸ್, ಸುಮಾರು 240 ಜನರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿತ್ತು. ಇದರಲ್ಲಿ ಹಿರಿಯರು ಮತ್ತು ಮಕ್ಕಳು ಕೂಡ ಇದ್ದರು.

ಈ ಮಧ್ಯೆ, ಹಮಾಸ್ ಸರ್ಕಾರದ ಆರೋಗ್ಯ ಇಲಾಖೆಯು, ಇಸ್ರೇಲ್ ದಾಳಿಯಲ್ಲಿ ಗಾಜಾಪಟ್ಟಿಯಲ್ಲಿ ಸತ್ತವರ ಸಂಖ್ಯೆ 11,500ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸಾವಿರಾರು ಮಕ್ಕಳು ಸೇರಿದ್ದಾರೆ. ಹಾಗಾಗಿ, ಯುದ್ಧ ವಿರಾಮಕ್ಕೆ ಸಾಕಷ್ಟು ಒತ್ತಡ ಕೂಡ ಕೇಳಿ ಬರುತ್ತಿದೆ.

ಈ ಸುದ್ದಿಯನ್ನೂ ಓದಿ: Israel- Palestine War: ಇದೇ ನೋಡಿ ಹಮಾಸ್‌ ಉಗ್ರರ ಸುರಂಗ; ಗಾಜಾದ ಆಸ್ಪತ್ರೆಯಡಿಯೇ ಪತ್ತೆ!

Exit mobile version