ಲಂಡನ್: ಬ್ರಿಟನ್ ಪ್ರಧಾನಿ (Britain PM) ರೇಸಿನಿಂದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಿಂದೆ ಸರಿದಿದ್ದು, ಭಾರತೀಯ ಮೂಲದ ಮಾಜಿ ವಿತ್ತ ಸಚಿವ ರಿಷಿ ಸುನಕ್ (Rishi Sunak) ಅವರು ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಲಿಜ್ ಟ್ರಸ್ ಅವರ ರಾಜೀನಾಮೆಯಿಂದ ಬ್ರಿಟನ್ ಪ್ರಧಾನಿ ಹುದ್ದೆ ತೆರವಾಗಿದ್ದು, ಈ ಹಿಂದೆ ಸ್ಪರ್ಧಿಸಿ ಸೋತಿದ್ದ ರಿಷಿ ಸುನಕ್ ಅವರು ಈ ಬಾರಿ ಪ್ರಧಾನಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಈ ಸ್ಪರ್ಧೆಯಲ್ಲಿ ಸಾಮಾನ್ಯ ಸಭೆಯಲ್ಲಿ ಸಭಾ ನಾಯಕಿಯಾಗಿರುವ ಪೆನ್ನಿ ಮೋರ್ಡಾಂಟ್ ಮಾತ್ರವೇ ಸ್ಪರ್ಧೆಯಲ್ಲಿದ್ದಾರೆ. ಆದರೆ, ರಿಷಿಗೆ ಸಂಸದರ ಬೆಂಬಲ ಮಾತ್ರವಲ್ಲದೇ ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರಿಂದಲೂ ವ್ಯಾಪಕ ಸಪೋರ್ಟ್ ದೊರೆಯುತ್ತಿದೆ.
ಸೋಮವಾರವೇ ರಿಷಿ ಸುನಕ್ ಅವರು ಪ್ರಧಾನಿಯಾಗುವುದು ನಿಶ್ಚಿತವಾಗಿದೆ ಎಂದು ಲಂಡನ್ ಬಹುತೇಕ ಪತ್ರಿಕೆಗಳು ವರದಿ ಮಾಡಿವೆ. ಸದ್ಯ, ಕನ್ಸರ್ವೇಟಿವ್ ಪಕ್ಷದ 146 ಸಂಸದರು ರಿಷಿ ಸುನಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸಾರ್ವಜನಿಕರಿಂದಲೂ ಸುನಕ್‌ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.
ಬೋರಿಸ್ ಹಿಂದೆ ಸರಿದಿದ್ದೇಕೆ?
ಹಲವಾರು ಹಗರಣಗಳಿಂದಾಗಿ ಮೂರು ತಿಂಗಳ ಹಿಂದೆಯಷ್ಟೇ ಪ್ರಧಾನಿಗೆ ಹುದ್ದೆಗೆ ರಾಜೀನಾಮೆ ನೀಡಿದ್ದ ಬೋರಿಸ್ ಜಾನ್ಸನ್ ಮತ್ತೆ ಪಿಎಂ ರೇಸಿನಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದರು. ಆದರೆ, ಈಗ ಪ್ರಧಾನಿ ಹುದ್ದೆಯ ಆಕಾಂಕ್ಷೆ ತಾನಲ್ಲ ಎಂದು ಹೇಳುವ ಮೂಲಕ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ನಾನು ಯೋಚನೆ ಮಾಡಿ, ಈಗೊಂದು ನಿರ್ಧಾರಕ್ಕೆ ಬಂದಿದ್ದೇನೆ. ಸಂಸತ್ತಿನಲ್ಲಿ ಪಕ್ಷವು ಒಗ್ಗಟ್ಟಾಗಿ ಇರದಿದ್ದರೆ ನೀವು ಅತ್ಯುತ್ತಮ ಆಡಳಿತವನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ, ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ. ಈ ಸ್ಪರ್ಧೆಯಲ್ಲಿ ಯಾರೇ ಗೆದ್ದರೂ ಅವರಿಗೆ ನನ್ನ ಬೆಂಬಲ ಇದ್ದೇ ಇರುತ್ತದೆ ಎಂದು ಜಾನ್ಸನ್ ತಿಳಿಸಿದ್ದಾರೆ.
ಇದನ್ನೂ ಓದಿ | ಬ್ರಿಟನ್ ಪ್ರಧಾನಿ ಚುನಾವಣೆಯ ನಾಲ್ಕನೇ ರೌಂಡ್‌ನಲ್ಲೂ ರಿಷಿ ಸುನಕ್ ಮುಂದು