ಲಂಡನ್: ಬ್ರಿಟನ್ ಪ್ರಧಾನಿಯಾಗುವತ್ತ ಭಾರತದ ಅಳಿಯ ರಿಷಿ ಸುನಕ್ ಸ್ಥಿರವಾದ ಹೆಜ್ಜೆಗಳನ್ನಿಡುತ್ತಿದ್ದರೆ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮಾತ್ರ ಅವರ ವಿರುದ್ಧ ಪ್ರಚಾರದಲ್ಲಿ ನಿರತರಾಗಿದ್ದಾರೆ.
ʻʻಯಾರಿಗೆ ಬೇಕಾದರೂ ಮತ ಹಾಕಿ, ಆದರೆ ರಿಷಿ ಮಾತ್ರ ಹಾಕಲೇಬೇಡಿʼʼ ಎಂದು ಬೋರಿಸ್ ಜಾನ್ಸನ್ ಎಲ್ಲ ಟೋರಿ (ಕನ್ಸರ್ವೇಟಿವ್ ಪಕ್ಷ) ಸದಸ್ಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರಧಾನಿ ಪದವಿಗೆ ಸ್ಪರ್ಧಿಸಿ ಸೋತಿರುವ ಟೋರಿ ಸದಸ್ಯರನ್ನು ರಿಷಿ ಅವರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಈ ಸಂಸದರು ಕೊನೆಯ ಹಂತದಲ್ಲಿ ಮತ ಹಾಕಬೇಕಾದ ಪಕ್ಷದ ಇತರ ಸದಸ್ಯರ ಮೇಲೆ ಸಾಕಷ್ಟು ಪ್ರಭಾವ ಬೀರಬಲ್ಲವರಾಗಿದ್ದಾರೆ.
ತಾನು ಯಾರನ್ನೂ ಬೆಂಬಲಿಸುವುದಿಲ್ಲ ಹಾಗೂ ಸ್ಪರ್ಧೆಯಲ್ಲೂ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಬೋರಿಸ್ ಸ್ಪಷ್ಟಪಡಿಸಿದ್ದಾರೆ. ಸೋತ ಸದಸ್ಯರ ಜೊತೆ ಅವರು ಗುಟ್ಟಾಗಿ ಮೀಟಿಂಗ್‌ಗಳನ್ನು ನಡೆಸಿದ್ದಾರೆ.
ಜಾನ್ಸನ್‌ಗೆ ರಿಷಿ ಮೇಲೆ ಸಿಟ್ಟು ಏಕೆಂದರೆ, ರಿಷಿ ಅವರ ರಾಜೀನಾಮೆ ಕಾರಣದಿಂದಾಗಿಯೇ ಬೋರಿಸ್ ಪ್ರಧಾನಿ ಪಟ್ಟ ತ್ಯಜಿಸುವಂತಾಗಿತ್ತು. ಬೋರಿಸ್ ಸರ್ಕಾರದ ಪ್ರಮುಖ ಹುದ್ದೆಯಲ್ಲಿ, ಹಣಕಾಸು ಸಚಿವಾಲಯದಲ್ಲಿದ್ದ ರಿಷಿ ಅವರ ರಾಜೀನಾಮೆಯಿಂದ ಒಟ್ಟಾರೆ ಸರ್ಕಾರದ ವಿಶ್ವಾಸಾರ್ಹತೆಯೇ ಕುಸಿದುಬಿದ್ದಿತ್ತಲ್ಲದೆ, ಬೋರಿಸ್ ಹೊರನಡೆಯವುದು ಅನಿವಾರ್ಯವಾಗಿತ್ತು. ಇದರಿಂದಾಗಿಯೇ ಬೋರಿಸ್ ದ್ವೇಷ ಸಾಧನೆಗೆ ಇಳಿದಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer | ಬ್ರಿಟನ್ ಪ್ರಧಾನಿ ಆಯ್ಕೆಗೆ ಮತದಾನದ ಮೇಲೆ ಮತದಾನ! ರಿಷಿ ಸುನಕ್ ಎಲ್ಲಿ?
ರಿಷಿ ಅವರ ತೀವ್ರ ಪ್ರತಿಸ್ಪರ್ಧಿ ಆಗಿರುವ ಲಿಝ್ ಟ್ರಸ್ ಅವರ ಆಯ್ಕೆಯ ಕುರಿತು ಬೋರಿಸ್ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ. ಇವರು ಬೋರಿಸ್ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಇನ್ನೊಬ್ಬ ಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರ ಬಗ್ಗೆಯೂ ಬೋರಿಸ್‌ಗೆ ತಕರಾರೇನಿಲ್ಲ. ಆದರೆ ರಿಷಿಗೆ ಕಟ್ಟಾ ವಿರೋಧ.
ʻʻನಂ.1 ಡೌನಿಂಗ್ ಸ್ಟ್ರೀಟ್‌ನ ಎಲ್ಲರೂ ರಿಷಿಯನ್ನು ದ್ವೇಷಿಸುತ್ತಾರೆ. ಇದು ತೀರ ವೈಯಕ್ತಿಕ ಮಟ್ಟಕ್ಕೆ ಹೋಗಿದೆ. ಬೋರಿಸ್ ಉರುಳಲು ಪೂರ್ತಿಯಾಗಿ ರಿಷಿಯೇ ಕಾರಣ ಎಂಬುದು ಅವರಿಗೆ ಖಚಿತವಾಗಿದೆ. ರಿಷಿ ಇದನ್ನು ತಿಂಗಳುಗಳ ಹಿಂದಿನಿಂದಲೂ ಯೋಜಿಸಿ ಮಾಡಿದ್ದರು ಎಂಬುದು ಅವರ ಯೋಚನೆʼʼ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.
ʻʻಅಂಥದೇನೂ ಇಲ್ಲ. ಆದರೆ ರಿಷಿ ಸುನಕ್ ಬೆನ್ನಿಗೆ ಇರಿದಿದ್ದಾರೆ ಎಂಬ ಭಾವನೆ ಬೋರಿಸ್ ಅವರಲ್ಲಿ ಇದೆʼʼ ಎಂದು ಬೋರಿಸ್ ಬೆಂಬಲಿಗರು ಹೇಳಿದ್ದಾರೆ. ಸದ್ಯ ಸಂಸದರ ಮತದಾನದ ಸರಣಿ ಸುತ್ತುಗಳಲ್ಲಿ ರಿಷಿ ಮುಂದಿದ್ದಾರೆ. ರಿಷಿ 101, ಮೊರ್ಡಾಂಟ್ 83, ಟ್ರಸ್ 64, ಬಡೆನೋಚ್ 32 ಮತಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ; ಮೊದಲ ಸುತ್ತಿನಲ್ಲಿ ಗೆದ್ದ ರಿಷಿ ಸುನಕ್