ಲಂಡನ್: ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (Britain PM Rishi Sunak) ಅವರು 2024ರಲ್ಲಿ ತಮ್ಮ ಬ್ರಿಟನ್ ಪ್ರಧಾನಿ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಿಎಂ ರಿಷಿ ಸುನಕ್ ಸೇರಿದಂತೆ ಅವರ ಸಂಪುಟದ 15 ಸಚಿವರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಲಿರುವುದು, ಎಲ್ಲ ಅಧಿಕಾರದಿಂದ ಹೊರ ಬೀಳಲಿದ್ದಾರೆಂದು ಪೋಲಿಂಗ್ ಡೇಟಾ ಆಧರಿಸಿ, ಬ್ರಿಟಿಷ್ ನ್ಯೂಸ್‌ಪೇಪರ್ಸ್ ವರದಿ ಮಾಡಿವೆ.
ಕನ್ಸರ್ವೇಟಿವ್ ಪಕ್ಷದ ಹಿರಿಯ ಸಂಸದರಾಗಿರುವ ಹಾಗೂ ಪ್ರಧಾನಿ ರಿಷಿ ಸುನಕ್, ಡೆಪ್ಯುಟಿ ಪಿಎಂ ಡೊಮಿನಿಕ್ ರಾಬ್, ಆರೋಗ್ಯ ಸಚಿವ ಸ್ಟೀವ್ ಜಾರ್ಕ್ಲೇ, ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ, ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ವ್ಯವಹಾರ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ಕಾಮನ್ಸ್ ನಾಯಕ ಪೆನ್ನಿ ಮೊರ್ಡಾಂಟ್ ಮತ್ತು ಪರಿಸರ ಕಾರ್ಯದರ್ಶಿ ಥೆರೆಸ್ ಕಾಫಿ ಸೇರಿ 15 ಸಚಿವರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಫೋಕಾಲ್‌ಡೇಟಾ (Focaldata) ಬಿಡುಗಡೆ ಮಾಡಿರುವ ಮಾಹಿತಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ರಿಷಿ ಸುನಕ್ ಅವರ ಸಂಪುಟದ ಜೆರೆಮಿ ಹಂಟ್, ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್‌ಮನ್, ಮೈಕೆಲ್ ಗೊವ್, ನಾಧಿಮ್ ಜವಾವಿ ಮತ್ತು ಕೆಮಿ ಬಡೆನೋಚ್ ಅವರು ಮಾತ್ರ ಮತ್ತೆ ಬ್ರಿಟನ್ ಸಂಸತ್ತು ಪ್ರವೇಶಿಸಲಿದ್ದಾರೆಂದು ಸಮೀಕ್ಷೆ ತಿಳಿಸಿದೆ. 2022ರಲ್ಲಿ ಭಾರೀ ರಾಜಕೀಯ ಅಸ್ಥಿರತೆಯನ್ನು ಕಂಡಿದ್ದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
ಇದನ್ನೂ ಓದಿ | ಸವಿಸ್ತಾರ ಅಂಕಣ | ಜ್ಞಾನದ ಬಲದಿಂದ ರಿಷಿ ಸುನಕ್ ಗೆದ್ದ ನೋಡಯ್ಯ!