Site icon Vistara News

Britain PM | ಉಲ್ಟಾ ಹೊಡೆದ ರಿಷಿ, ಹವಾಮಾನ ಬದಲಾವಣೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಸೈ!

Rishi Sunak and Britain PM

ಲಂಡನ್: ಬ್ರಿಟನ್‌ ನೂತನ ಪ್ರಧಾನಿ, ಭಾರತೀಯ ಮೂಲದ ರಿಷಿ ಸುನಕ್ (Britain PM Rishi Sunak), ಮೊದಲ ಬಾರಿಗೆ ತಮ್ಮ ನಿರ್ಧಾರದಲ್ಲಿ ಉಲ್ಟಾ ಹೊಡೆದಿದ್ದಾರೆ. ಮುಂದಿನ ವಾರ ಈಜಿಪ್ಟ್‌ನಲ್ಲಿ ನಡೆಯಲಿರುವ ವಿಶ್ವ ಸಂಸ್ಥೆಯ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಪ್ರಧಾನಿಯಾಗುವುದಕ್ಕಿಂತಲೂ ಮುಂಚೆ ಅವರು ಈ ಕುರಿತು ಭಿನ್ನ ನಿಲುವು ಪ್ರದರ್ಶಿಸಿದ್ದರು. ದೇಶೀಯ ಬದ್ಧತೆಗಳನ್ನು ಪೂರೈಸುವುದಕ್ಕಾಗಿ ವಿಶ್ವಸಂಸ್ಥೆಯ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್(COP27)ನಿಂದ ದೂರವುಳಿಯುವುದಾಗಿ ಹೇಳಿಕೊಂಡಿದ್ದರು. ಆದರೆ, ಈಗ ಸಮಾವೇಶದಲ್ಲಿ ಭಾಗವಹಿಸುವುದಾಗಿ ಹೇಳುವ ಮೂಲಕ ಯೂ-ಟರ್ನ್ ಹೊಡೆದಿದ್ದಾರೆ.

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಪಾಲ್ಗೊಳ್ಳುವ ಬಗ್ಗೆ ರಿಷಿ ಸುನಕ್ ಘೋಷಣೆ ಮಾಡುತ್ತಿದ್ದಂತೆ ನಾನಾ ತರಹದ ಚರ್ಚೆಗಳು ಶುರುವಾಗಿವೆ. ಅನನುಭವಿ ನಾಯಕನಾಗಿರುವ ರಿಷಿ ಸುನಕ್ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಯುರೋಪಿಯನ್ ಇತರ ನಾಯಕರನ್ನು ಭೇಟಿಯಾಗುವ ತವಕದಲ್ಲಿರುವಂತಿದೆ ಎಂದೂ ಟೀಕಿಸಲಾಗುತ್ತಿದೆ.

ಹವಾಮಾನ ಬದಲಾವಣೆ ವಿರುದ್ಧ ಕ್ರಮವಿಲ್ಲದೇ ದೀರ್ಘಾವಧಿಗೆ ಸಮೃದ್ಧಿ ಎಂಬುದೂ ಇಲ್ಲ. ನವೀಕರಿಸಬಹುದಾದ ಇಂಧನಗಳ ಮೇಲೆ ಹೂಡಿಕೆ ಮಾಡದೇ ಶಕ್ತಿ ದೊರೆಯುವುದಿಲ್ಲ. ಆ ಕಾರಣಕ್ಕಾಗಿಯೇ ನಾನು ಮುಂದಿನ ವಾರ ಈಜಿಪ್ಟ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲಿದ್ದೇನೆ. ಇದರೊಂದಿಗೆ ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯದ ಬಗೆಗಿನ ಗ್ಲಾಸ್ಗೋ ಸಮಾವೇಶದ ಪ್ರಾತಿನಿಧ್ಯವನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ರಿಷಿ ಸುನಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಗ್ಲಾಸ್ಗೋದಲ್ಲಿ ಈ ಹಿಂದಿನ ಕ್ಲೈಮೇಟ್ ಚೇಂಜ್ ಸಮಾವೇಶ ನಡೆದಿತ್ತು. ಅದರ ನೇತೃತ್ವವನ್ನು ಬ್ರಿಟನ್‌ನ ಈ ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ವಹಿಸಿಕೊಂಡಿದ್ದರು. ಅಲ್ಲದೇ, ಹೊರಸೂಸುವ ಅನಿಲ ಪ್ರಮಾಣದಲ್ಲಿ ಬ್ರಿಟನ್ ಶೂನ್ಯತೆಯನ್ನು ಸಾಧಿಸುವ ಗುರಿಯನ್ನು ಅವರು ಹಾಕಿಕೊಂಡಿದ್ದರು. ಆದರೆ, ಭ್ರಷ್ಟಾಚಾರ ಆರೋಪಗಳಿಂದಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಈಗ ರಿಷಿ ಸುನಕ್ ಅವರು ಈಜಿಪ್ಟ್‌ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ಯುಕೆ ಗೃಹ ಇಲಾಖೆ ಕಾರ್ಯದರ್ಶಿಯಾಗಿ ಮತ್ತೆ ನೇಮಕಗೊಂಡ ಸುಯೆಲ್ಲಾ ಬ್ರಾವರ್​ಮನ್; ಟೀಕೆಗೆ ಒಳಗಾದ ರಿಷಿ ಸುನಕ್​

Exit mobile version