Site icon Vistara News

Britain Violence: ಬ್ರಿಟನ್‌ನಲ್ಲಿ ವಲಸಿಗರು, ಮುಸ್ಲಿಮರ ವಿರುದ್ಧ ಪ್ರತಿಕಾರದ ದಾಳಿ ನಡೆಯುತ್ತಿರುವುದೇಕೆ?

Anti-Racist Protests

ಮಕ್ಕಳ ನೃತ್ಯ ಕಾರ್ಯಕ್ರಮವೊಂದರಲ್ಲಿ ನಡೆದ ದಾಳಿಯಿಂದ ಉಂಟಾದ ಗಲಭೆ (Britain Violence) ಈಗ ಯುಕೆಯ (United Kingdom) ವಿವಿಧ ಭಾಗಗಳನ್ನು ಆವರಿಸಿದೆ. ಅಲ್ಲಲ್ಲಿ ಪ್ರತಿಭಟನೆಗಳು (protest) ನಡೆಯುತ್ತಿದ್ದು, ವಲಸಿಗರು, ಮುಸ್ಲಿಮರನ್ನು (muslim community) ಗುರಿಯಾಗಿಸಿಕೊಂಡು ಅಂಗಡಿ ಧ್ವಂಸ, ಪೊಲೀಸರೊಂದಿಗೆ ಘರ್ಷಣೆ ಹೆಚ್ಚಾಗುತ್ತಿದೆ.

ಜುಲೈ 29ರಂದು ಉತ್ತರ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿ ಟೇಲರ್ ಸ್ವಿಫ್ಟ್ ನೃತ್ಯ ಕಾರ್ಯಕ್ರಮದ ವೇಳೆ ನಡೆದ ದಾಳಿಯಲ್ಲಿ ಆರರಿಂದ ಒಂಬತ್ತು ವರ್ಷ ವಯಸ್ಸಿನ ಮೂವರು ಬಾಲಕಿಯರು ಕೊಲ್ಲಲ್ಪಟ್ಟರು. ಇತರ ಎಂಟು ಮಕ್ಕಳು ಮತ್ತು ಇಬ್ಬರು ವಯಸ್ಕರು ಗಾಯಗೊಂಡರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ದಾಳಿಕೋರರಲ್ಲಿ ಒಬ್ಬನಾದ 17 ವರ್ಷದ ಆಕ್ಸೆಲ್ ರುಡಕುಬಾನ ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಮೂರು ಕೊಲೆ ಪ್ರಕರಣ, 10 ಕೊಲೆ ಯತ್ನದ ಆರೋಪ ಮತ್ತು ಹರಿತವಾದ ಬ್ಲೇಡ್ ಅನ್ನು ಹೊಂದಿರುವ ಆರೋಪ ಹೊರಿಸಲಾಗಿದೆ. ಈ ಘಟನೆ ವಲಸಿಗರು ಮತ್ತು ಮುಸ್ಲಿಮರ ವಿರುದ್ಧ ಸ್ಥಳಿಯ ಜನರು ರೊಚ್ಚಿಗೇಳುವಂತೆ ಮಾಡಿದೆ.

ಘಟನೆಯ ಬಳಿಕ ಆಕ್ಸೆಲ್ ರುಡಾಕುಬಾನಾ ವೇಲ್ಸ್‌ನ ಕಾರ್ಡಿಫ್‌ನಲ್ಲಿ ಹುಟ್ಟಿ ಬೆಳೆದಿದ್ದು, ಈತ ಇಸ್ಲಾಮಿ ವಲಸಿಗ ಎಂಬ ಸುಳ್ಳು ಮಾಹಿತಿ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿದೆ. ಈ ತಪ್ಪು ಮಾಹಿತಿಯಿಂದ ಸ್ಥಳೀಯ ಮಸೀದಿಯ ಮೇಲೆ ದಾಳಿಯ ಪ್ರಯತ್ನ ಸೇರಿದಂತೆ ಸೌತ್‌ಪೋರ್ಟ್‌ನಲ್ಲಿ ಹಿಂಸಾತ್ಮಕ ಮುಸ್ಲಿಂ ವಿರೋಧಿ ಪ್ರತಿಭಟನೆಗಳು ಆರಂಭವಾಯಿತು.


ತೀವ್ರಗೊಂಡ ಪ್ರತಿಭಟನೆ

ಕೋಪಗೊಂಡ ಪ್ರತಿಭಟನಾಕಾರರ ಗುಂಪು ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿಯ ಮೇಲೆ ದಾಳಿ ನಡೆಸಿ ವಲಸೆಯ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಮತ್ತು ಸರ್ಕಾರದಿಂದ ಕ್ರಮಕ್ಕೆ ಒತ್ತಾಯಿಸಿದರು. “ನಮ್ಮ ಮಕ್ಕಳನ್ನು ಉಳಿಸಿ” ಮತ್ತು “ನಮಗೆ ನಮ್ಮ ದೇಶ ಮರಳಬೇಕು” ಎಂಬ ಗುಂಪಿನ ಘೋಷಣೆಯನ್ನು ಕೂಗಿದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆಗಳನ್ನು ನಡೆಸಿದರು. ರಾತ್ರಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಮೆಟ್ರೋಪಾಲಿಟನ್ ಪೊಲೀಸರು 111 ಮಂದಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಐದು ಮಂದಿ ಅಧಿಕಾರಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸೌತ್‌ಪೋರ್ಟ್‌ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಪೊಲೀಸ್ ವ್ಯಾನ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು.

ಬಳಿಕ ಬ್ರಿಟನ್‌ನಾದ್ಯಂತ ಸುಂದರ್‌ಲ್ಯಾಂಡ್, ಮ್ಯಾಂಚೆಸ್ಟರ್, ಪ್ಲೈಮೌತ್ ಮತ್ತು ಬೆಲ್‌ಫಾಸ್ಟ್ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಲಭೆಗಳು ಹೆಚ್ಚಾಗಿವೆ. ಪ್ರತಿಭಟನಾಕಾರರು ವಲಸಿಗರನ್ನು ಅಥವಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅಂಗಡಿಗಳನ್ನು ಧ್ವಂಸಗೊಳಿಸುತ್ತಿದ್ದಾರೆ.

ಗಲಭೆ ಹಿಂದೆ ಯಾರಿದ್ದಾರೆ?

ಪ್ರಮುಖ ಮುಸ್ಲಿಂ ವಿರೋಧಿ ಮತ್ತು ವಲಸೆ-ವಿರೋಧಿ ಕಾರ್ಯಕರ್ತ ಎಂದು ಗುರುತಿಸಿಕೊಂಡಿರುವ ಸ್ಟೀಫನ್ ಯಾಕ್ಸ್ ಲೇ ಲೆನ್ನನ್ ಉದ್ವಿಗ್ನತೆಯನ್ನು ಪ್ರಚೋದಿಸಲು ಸುಳ್ಳು ಮಾಹಿತಿಯನ್ನು ಹರಡಿದ್ದಾನೆ ಎಂದು ಆರೋಪಿಸಲಾಗಿದೆ. ಪೋಲೀಸರ ಪ್ರಕಾರ ಘರ್ಷಣೆಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಸ್ಥಳೀಯ ಪ್ರದೇಶಗಳ ಹೊರಗಿನ ಬಲಪಂಥೀಯ ಹೋರಾಟಗಾರರು. ಇವರೊಂದಿಗೆ ಸ್ಥಳೀಯ ಸಮಸ್ಯೆ ಹೊಂದಿರುವ ಕೆಲವು ವ್ಯಕ್ತಿಗಳು ಅಥವಾ ಯುವಕರು ಸಹ ಸೇರಿಕೊಂಡಿದ್ದಾರೆ.


ಗಲಭೆಯ ಹಿಂದಿನ ಪ್ರೇರಣೆ

ಗಲಭೆಕೋರರು ತಮ್ಮನ್ನು “ದೇಶಭಕ್ತರು” ಎಂದು ಪ್ರತಿಪಾದಿಸಿದ್ದಾರೆ. ಹೆಚ್ಚುತ್ತಿರುವ ವಲಸೆಯು ಬ್ರಿಟಿಷ್ ಸಮಾಜವನ್ನು ದುರ್ಬಲಗೊಳಿಸುತ್ತಿವೆ ಎಂದು ಪ್ರತಿಪಾದಿಸುತ್ತಿದ್ದಾರೆ. ವಲಸೆಯು ಹಿಂಸಾಚಾರ ಮತ್ತು ಅಪರಾಧವನ್ನು ಉತ್ತೇಜಿಸುತ್ತದೆ ಮತ್ತು ರಾಜಕಾರಣಿಗಳು ವಲಸಿಗರಿಗೆ ಒಲವು ತೋರುತ್ತಾರೆ ಎಂದು ಅವರು ವಾದಿಸಿದ್ದಾರೆ. ಬ್ರಿಟನ್‌ನಲ್ಲಿ ವಲಸಿಗರು ಹೆಚ್ಚುತ್ತಿದ್ದಾರೆ. ಅವರಿಂದ ಸ್ಥಳೀಯ ಬ್ರಿಟಿಷರಿಗೆ ಅಪಾಯ ಎದುರಾಗಿದೆ ಎಂಬ ಆಕ್ರೋಶ ಹೆಚ್ಚುತ್ತಿದೆ.

ಸರ್ಕಾರದ ಪ್ರತಿಕ್ರಿಯೆ ಏನು?

ಗಲಭೆಗಳಿಗೆ ಪ್ರತಿಕ್ರಿಯೆಯಾಗಿ ಸ್ಟಾರ್ಮರ್ ನೇತೃತ್ವದ ಸರ್ಕಾರವು ಕ್ಷಿಪ್ರ ಕ್ರಮ ಕೈಗೊಂಡಿದೆ. ಸುಮಾರು 600 ಹೆಚ್ಚುವರಿ ಜೈಲು ಸ್ಥಳಗಳನ್ನು ಲಭ್ಯವಾಗುವಂತೆ ಮಾಡಿದೆ. ಪರಿಸ್ಥಿತಿಯು ಉಲ್ಬಣಗೊಳ್ಳುವುದನ್ನು ತಡೆಯಲು ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಿಂಸಾತ್ಮಕ ಕೃತ್ಯಕ್ಕಾಗಿ 58 ವರ್ಷ ವಯಸ್ಸಿನ ಬ್ರಿಟಿಷ್ ವ್ಯಕ್ತಿಯೊಬ್ಬರಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: Bangladesh Unrest: ಭಾರತದ ಗಡಿಯೊಳಗೆ ಪ್ರವೇಶಕ್ಕೆ ಬಾಂಗ್ಲಾದ 600 ಜನ ಯತ್ನ-BSF ಮಾಹಿತಿ

ಫೇಸ್‌ಬುಕ್‌ನಲ್ಲಿ ಜನಾಂಗೀಯ ದ್ವೇಷವನ್ನು ಹುಟ್ಟುಹಾಕಲು ಬೆದರಿಕೆಯ ಭಾಷೆ ಬಳಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಹ ಸರ್ಕಾರ ಗುರಿಯಾಗಿಸಿಕೊಂಡಿದೆ. ಪ್ರಚೋದನೆ ಮತ್ತು ಆನ್‌ಲೈನ್‌ನಲ್ಲಿ ಸುಳ್ಳು ಮಾಹಿತಿ ಹರಡುವುದನ್ನು ತಡೆಯಲು ಸಚಿವ ಪೀಟರ್ ಕೈಲ್ ಪ್ರಮುಖ ಟೆಕ್ ಕಂಪನಿಗಳಾದ ಟಿಕ್‌ಟಾಕ್, ಮೆಟಾ, ಗೂಗಲ್ ಮತ್ತು ಎಕ್ಸ್‌ನ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ.

Exit mobile version