ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಅಲ್ಲಿನ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಕುರಿತ ಮತ ಯಾಚನೆಯಲ್ಲಿ ತಮ್ಮ ವಿರುದ್ಧದ ಬಂಡಾಯದ ಅಲೆಯ ಹೊರತಾಗಿಯೂ ಗೆದ್ದಿದ್ದಾರೆ.
ಪ್ರಧಾನಿ ಬೋರಿಸ್ ಜಾನ್ಸನ್ 59% ಮತಗಳನ್ನು ಗಳಿಸಿದ್ದು, ಇನ್ನೂ ಒಂದು ವರ್ಷ ಅವರ ಅಧಿಕಾರ ಅಬಾಧಿತವಾಗಿ ಮುಂದುವರಿಯಲಿದೆ. ಬೋರಿಸ್ ಜಾನ್ಸನ್ ಪರ 211 ಸಂಸದರು ಮತ ಚಲಾಯಿಸಿದರೆ, ವಿರುದ್ಧ 148 ಮತಗಳು ಬಿದ್ದಿವೆ. ಇದು ಅದ್ಭುತ ಗೆಲುವು ಎಂದು ಪ್ರಧಾನಿ ಜಾನ್ಸನ್ ಹೇಳಿಕೊಂಡಿದ್ದಾರೆ.
ಈ ಫಲಿತಾಂಶದಿಂದ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವಂತಾಗಿದೆ. ಆದರೆ ಉಂಟಾಗಿರುವ ಬಂಡಾಯದ ಅಲೆ ಜೋರಾಗಿದ್ದು, ಆಡಳಿತ ದುರ್ಬಲವಾಗಿರುವುದನ್ನು ಬಿಂಬಿಸಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಏಕೆ ಅವಿಶ್ವಾಸ ಗೊತ್ತುವಳಿ ?
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬ್ರಿಟನ್ ಸಂಕಷ್ಟದಲ್ಲಿದ್ದಾಗಲೂ ಪ್ರಧಾನಿ ಬೋರಿಸ್ ಜಾನ್ಸನ್ ಕಚೇರಿಯಲ್ಲಿ ಪಾರ್ಟಿ ಮಾಡಿದ್ದರು ಎಂಬ ಆರೋಪ ಗಂಭೀರ ಸ್ವರೂಪ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯರಿಂದಲೇ ವಿಶ್ವಾಸ ಮತ ಯಾಚಿಸಿದ್ದರು. ವಿವಾದ ಕುರಿತು ಬೋರಿಸ್ ಜಾನ್ಸನ್ ಕ್ಷಮೆ ಕೋರಿದ್ದರೂ ತಣ್ಣಗಾಗಿರಲಿಲ್ಲ. 2021 ರಲ್ಲಿ ಬ್ರಿಟನ್ ರಾಜಕುಮಾರ ಫಿಲಿಪ್ (ರಾಣಿ ಎಲಿಜಬೆತ್ ಪತಿ) ಅವರ ಅಂತ್ಯಕ್ರಿಯೆಗೆ ಕೆಲವೇ ಗಂಟೆಗೆ ಮುನ್ನವೂ ಮದ್ಯದ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದರು ಎಂಬ ಆರೋಪ ಬೋರಿಸ್ ಅವರ ಮೇಲಿದೆ.
ಕೋವಿಡ್-19 ಬಿಕ್ಕಟ್ಟಿನ ಲಾಕ್ ಡೌನ್‌ನ ಕಠಿಣ ನಿರ್ಬಂಧ ಜಾರಿಯಾಗಿದ್ದಾಗ ಜನರಿಗೆ ಸಾರ್ವಜನಿಕ ಸಂಚಾರ, ಓಡಾಟಗಳಿಗೆ ನಿರ್ಬಂಧ ಇತ್ತು. ಆದರೆ ಪ್ರಧಾನಿಯ ಕಚೇರಿಯಲ್ಲಿ ಭರ್ಜರಿ ಪಾರ್ಟಿ ನಡೆದಿತ್ತು. ಬೋರಿಸ್ ಜಾನ್ಸನ್ ಮತ್ತು ಸಂಗಡಿಗರು ತಡರಾತ್ರಿಯಿಂದ ಬೆಳಗ್ಗಿನ ಜಾವದ ತನಕವೂ ಭಾರಿ ಪಾರ್ಟಿ ಮಾಡುತ್ತಿದ್ದರು. ಇದು ದೊಡ್ಡ ಹಗರಣವೇ ಆಗಿತ್ತು. ರಾಜೀನಾಮೆಗೆ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ತಮ್ಮ ಸ್ವಪಕ್ಷ ಕನ್ಸರ್ವೇಟಿವ್‌ನ ಸಂಸದರ ವಿಶ್ವಾಸ ಮತ ಯಾಚಿಸಿದ್ದರು.