Site icon Vistara News

Queen Elizabeth Death | ದುಃಖದ ಕಡಲಿನಲ್ಲಿ ಮುಳುಗಿದ ಬ್ರಿಟನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸ್!

Buckingham Palace

ಲಂಡನ್: ಕ್ವೀನ್ ಎಲಿಜಬೆತ್ ನಿಧನದ (Queen Elizabeth Death) ಬಳಿಕ ಬಕಿಂಗ್ ಹ್ಯಾಮ್ ಪ್ಯಾಲೇಸ್ ದುಃಖದಲ್ಲಿ ಮುಳುಗಿತು. ರಾಣಿ ನಿಧನವಾದ ಸುದ್ದಿ ತಿಳಿಯುತ್ತಿದ್ದಂತೆ ಅರಮನೆಯ ಮುಂದೆ ನೆರೆದಿದ್ದ ದುಃಖತಪ್ತ ಜನರಲ್ಲಿ ಕಣ್ಣೀರು ಹರಿಯುತ್ತಿತ್ತು. ದುಃಖದಲ್ಲೇ ಗಾಡ್ ಸೇವ್ ದಿ ಕ್ವೀನ್ ಗೀತೆಯನ್ನು ಹಾಡಿದರು. ವಾಸ್ತವದಲ್ಲಿ ಕ್ವೀನ್ ಎಲಿಜಬೆತ್ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅರಮನೆಗೆ ಬರುವ ಜನರ ಸಂಖ್ಯೆ ಹೆಚ್ಚಾಗಿತ್ತು.

ಕ್ವೀನ್ ಎಲಿಜಬೆತ್ ನಿಧನವನ್ನು ಅಧಿಕೃತವಾಗಿ ಘೋಷಿಸುತ್ತಿದ್ದಂತೆ ಯೂನಿಯನ್ ಜಾಕ್ ಧ್ವಜವನ್ನು ರಾಣಿಯ ನಿವಾಸದ ಮೇಲೆ ಅರ್ಧಕ್ಕೆ ಇಳಿಸಲಾಯಿತು. ಇದೇ ವೇಳೆ, ಲಂಡನ್ ಹೊರ ವಲಯದಲ್ಲಿರುವ ವಿಂಡ್ಸರ್ ಕ್ಯಾಸಲ್ ರೆಸಿಡೆನ್ಸ್ ಮೇಲೆ ಕಾಮನಬಿಲ್ಲು ಕಾಣಿಸಿಕೊಂಡಿತು.

ಅಲ್ಲಿ ನರೆದಿದ್ದ ಬಹುತೇಕರು ಕ್ವೀನ್ ಎಲಿಜಬೆತ್ ಮೇಲಿನ ತಮ್ಮ ಅಭಿಮಾನವನ್ನು, ಗೌರವವನ್ನು, ಪ್ರೀತಿಯನ್ನು ಪ್ರದರ್ಶಿಸುತ್ತಿದ್ದರು. ನಾನು ಜೀವಂತ ಇರುವವರೆಗೂ ಅವರು ರಾಣಿಯಾಗಿದ್ದರು. ನನ್ನ ತಂದೆ ತಾಯಿ ಇದ್ದಾಗಲೂ ಅವರು ಕ್ವೀನ್ ಆಗಿದ್ದರು ಎಂದು ಅರಮನೆ ಮುಂದೆ ನೆರೆದಿದ್ದ ವ್ಯಕ್ತಿಯೊಬ್ಬರು ಹೇಳಿಕೊಂಡರು.

ಅವರು ನಮ್ಮ ದೇಶದ ತಾಯಿಯಾಗಿದ್ದರು. ಅನೇಕ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿದ್ದರು. ಅವರಿಗೆ ನನ್ನ ಗೌರವವು ಅನನ್ಯವಾಗಿದೆ. ಆದರೆ, ಅವರ ಮೇಲಿನ ಪ್ರೀತಿ ಇನ್ನೂ ಹೆಚ್ಚಿನದು ಎನ್ನುತ್ತಾ ಸೂಜನ್ ಅಂಟೋನೊವಿಕ್ಸ್ ಅವರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಜನರಿಗೆ ಅವರ ಬೆಂಬಲ ಅಗತ್ಯವಿದ್ದಾಗಲೆಲ್ಲಾ ಅವರು ಜನರಿಗೆ ಬೆಂಗಾವಲಾಗಿ ನಿಲ್ಲುತ್ತಿದ್ದರು. ನಮ್ಮ ಅಜ್ಜಿ ಕೂಡ ಕ್ವೀನ್ ಎಲಿಜಬೆತ್ ಅವರ ಬಹುದೊಡ್ಡ ಅಭಿಮಾನಿಯಾಗಿದ್ದರು. ಅವರು ಕಳೆದ ವರ್ಷವಷ್ಟೇ ನಿಧನರಾಗಿದ್ದಾರೆ. ಕ್ವೀನ್ ಎಲಿಜಬೆತ್ ಅವರು ನಮ್ಮ ರಾಷ್ಟ್ರದ ಸಾಕ್ಷಿಪ್ರಜ್ಞೆಯಂತಿದ್ದರು ಎಂದು 24 ವರ್ಷದ ಜೋಶ್ವಾ ಎಲ್ಲಿಸ್ ನೆನಪಿಸಿಕೊಂಡರು.

ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್

Exit mobile version