ಒಟ್ಟಾವಾ, ಕೆನಡಾ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹಾಗೂ ಅವರ ಪತ್ನಿ ಸೋಫಿ (Sophie) ಅವರು ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಮಂಗಳ ಹಾಡಲು ನಿರ್ಧರಿಸಿದ್ದಾರೆ(Justin Trudeau Separation). ಈ ವಿಷಯವನ್ನು ಜಸ್ಟಿನ್ ಟ್ರೂಡೊ ಅವರು ಇನ್‌ಸ್ಟಾಗ್ರಾಮ್ ವೇದಿಕೆಯಲ್ಲಿ ಪೋಸ್ಟ್ ಮಾಡಿ ಖಚಿತಪಡಿಸಿದ್ದಾರೆ. ಕಠಿಣ ಹಾಗೂ ಅರ್ಥಪೂರ್ಣ ಹಲವು ಸುತ್ತಿನ ಮಾತುಕತೆ ಬಳಿಕ ನಾವಿಬ್ಬರೂ ಪ್ರತ್ಯೇಕವಾಗಲು ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಈ ಕುರಿತು ಕೆನಡಾ ಪ್ರಧಾನಿ ಕಾರ್ಯಾಲಯವು (Canada PM office) ಅಧಿಕೃತವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ದಂಪತಿಗಳಿಬ್ಬರೂ ಪ್ರತ್ಯೇಕವಾಗುವ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ ಎಂದು ತಿಳಿಸಲಾಗಿದೆ.
“ಎಲ್ಲರಿಗೂ ನಮಸ್ಕಾರ, ಜಸ್ಟಿನ್ ಮತ್ತು ನಾನು ಅನೇಕ ಅರ್ಥಪೂರ್ಣ ಮತ್ತು ಕಷ್ಟಕರ ಮಾತುಕತೆಯ ನಂತರ, ನಾವು ಪ್ರತ್ಯೇಕಗೊಳ್ಳುವ ನಿರ್ಧಾರವನ್ನು ಮಾಡಿದ್ದೇವೆ ಎಂಬ ಅಂಶವನ್ನು ಹಂಚಿಕೊಳ್ಳಲು ಬಯಸುತ್ತೇವೆ. ಯಾವಾಗಲೂ ಹಾಗೆ, ನಾವು ಒಬ್ಬರಿಗೊಬ್ಬರು ಆಳವಾದ ಪ್ರೀತಿ ಮತ್ತು ಗೌರವವನ್ನು ಹೊಂದಿರುವ ನಿಕಟ ಕುಟುಂಬವಾಗಿ ಉಳಿಯುತ್ತೇವೆ. ನಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ, ನಮ್ಮ ಮತ್ತು ಅವರ ಗೌಪ್ಯತೆಯನ್ನು ನೀವು ಗೌರವಿಸಬೇಕೆಂದು ನಾವು ಕೇಳುತ್ತೇವೆ. ಧನ್ಯವಾದಗಳು” ಎಂದು ಸೋಫಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರುಡೊ ಅವರ ತಂದೆ ಪಿಯರೆ ಟ್ರುಡೊ ಅವರ ನಂತರ ಕೆನಡಾದ ಪ್ರಧಾನ ಮಂತ್ರಿಯೊಬ್ಬರು ಪ್ರತ್ಯೇಕವಾಗುತ್ತಿರುವುದು ಇದೇ ಮೊದಲು. ಪಿಯರೆ ಟ್ರೂಡೂ ಅವರು, ಮಾರ್ಗರೆಟ್ ಟ್ರುಡೊ ಅವರಿಂದ ಬೇರ್ಪಟ್ಟಿದ್ದರು. ತಮ್ಮ ಅಧಿಕಾರದ ಕೊನೆಯ ತಿಂಗಳಲ್ಲಿ 1984ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: ದೇವರು ಹೇಳಿದ್ದಕ್ಕೆ ಹೆಂಡತಿಗೆ ವಿಚ್ಛೇದನ ಕೊಡಲು ಹೊರಟಿದ್ದ ಪತಿರಾಯ; ಕೊನೆಗೆ ಜಡ್ಜ್ ಮಾತು ಕೇಳಿ ಮತ್ತೆ ಒಂದಾದ
ಟ್ರೂಡೊ ಅವರ ಪತ್ನಿ ಸೋಫಿ ಅವರು ಮಾಜಿ ಮನರಂಜನಾ ವರದಿಗಾರ್ತಿಯಾಗಿದ್ದರು. ಟ್ರೂಡೋ ಮತ್ತು ಸೋಫಿ ಇಬ್ಬರು ಬಾಲ್ಯದ ಸ್ನೇಹಿತರಾಗಿದ್ದರು. 2003ರಲ್ಲಿ ಅವರಿಬ್ಬರ ಸ್ನೇಹ ಶುರುವಾಯಿತು. ಅಂತಿಮವಾಗಿ ಡೇಟಿಂಗ್ ಮಾಡಲಾರಂಭಿಸಿದರು ಮತ್ತು 2005 ಇಬ್ಬರು ಮದುವೆಯಾದರು. ದಂಪತಿಗೆ 15 ವರ್ಷ ಝೇವಿಯರ್, 14 ವರ್ಷ ಎಲ್ಲಾ ಗ್ರೇಸ್ ಹಾಗೂ 9 ವರ್ಷದ ಓಲ್ಡ್ ಹ್ಯಾಡ್ರಿಯನ್ ಮಕ್ಕಳಿದ್ದಾರೆ.