ಸಿಡ್ನಿ: ಕೃತಕ ಬುದ್ಧಿಮತ್ತೆ (Artificial Intelligence) ಆಧಾರದ ಮೇಲೆ ಕಾರ್ಯನಿರ್ವಹಿಸುವ ಚಾಟ್‌ಜಿಪಿಟಿ ಚಾಟ್‌ಬಾಟ್ ಈಗ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದೆ. ಅದರಲ್ಲೂ, ಪ್ರೇಮ ಪತ್ರ ಬರೆಯುವುದರಿಂದ ಹಿಡಿದು ಕೋಡಿಂಗ್‌ವರೆಗೆ ಸಕಲ ರೀತಿಯಲ್ಲೂ ಚಾಟ್‌ಜಿಪಿಟಿ ನೆರವಾಗುತ್ತಿದೆ. ಯಾರ ಬಗ್ಗೆಯಾದರೂ ಒಂದು ಲೇಖನ ಬರೆದುಕೊಡು ಎಂದೂ ಚಾಟ್‌ಜಿಪಿಟಿ ಕ್ಷಣಾರ್ಧದಲ್ಲಿ ಬರೆದುಕೊಡುತ್ತದೆ. ಬೇರೆಯವರ ಬಗ್ಗೆ ಮಾಹಿತಿಯನ್ನೂ ಒದಗಿಸುತ್ತದೆ. ಆದರೆ, ಇಂತಹ ಚಾಟ್‌ಜಿಪಿಟಿ ವಿರುದ್ಧ ಈಗ ಮೊದಲ ಕೇಸ್ (ChatGpt Lawsuit) ಬಿದ್ದಿದೆ. ಆಸ್ಟ್ರೇಲಿಯಾ ಮೇಯರ್ ಒಬ್ಬರ ಬಗ್ಗೆ ತಪ್ಪು ಮಾಹಿತಿ ನೀಡಿದ್ದು, ಚಾಟ್‌ಬಾಟ್ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಹೆಪ್‌ಬರ್ನ್ ಶೈರ್ ಮೇಯರ್ ಆಗಿರುವ ಬ್ರೈನ್ ಹುಡ್ ಅವರ ಬಗ್ಗೆ ಚಾಟ್‌ಜಿಪಿಟಿ ನೀಡಿದ ಮಾಹಿತಿ ಆಧರಿಸಿ ಅವರು ದೂರು ದಾಖಲಿಸಿದ್ದಾರೆ. ಬ್ರೈನ್ ಹುಡ್ ಅವರು ವಿದೇಶದಿಂದ ಲಂಚ ಪಡೆದಿದ್ದಾರೆ. ಇದಕ್ಕಾಗಿ ಅವರು 2000ರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂದು ಚಾಟ್‌ಜಿಪಿಟಿಯು ಮಾಹಿತಿ ನೀಡದೆ. ಈ ಮಾಹಿತಿಯು ಸಾರ್ವಜನಿಕವಾಗಿ ಬಹಿರಂಗವಾಗಿದ್ದು, ಇದನ್ನು ತಿಳಿದ ಬ್ರೈನ್ ಹುಡ್ ಅವರು ಕಂಪನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಲಂಚದ ಪ್ರಕರಣದಲ್ಲಿ ಬ್ರೈನ್ ಹುಡ್ ಅವರು ದೋಷಿ ಎಂಬುದಾಗಿ ಕೋರ್ಟ್ ತೀರ್ಪು ನೀಡಿಲ್ಲ ಹಾಗೂ ಅವರು ಜೈಲು ಶಿಕ್ಷೆ ಅನುಭವಿಸಿಲ್ಲ. ಆದರೆ, ಚಾಟ್‌ಜಿಪಿಟಿಯು ಅವರ ಬಗ್ಗೆ ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿದೆ. ಹಾಗಾಗಿ, ಚಾಟ್‌ಜಿಪಿಟಿಯು 28 ದಿನದಲ್ಲಿ ತನ್ನ ತಪ್ಪನ್ನು ಸರಿಪಡಿಸಬೇಕು ಹಾಗೂ ಈ ಕುರಿತು ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಬ್ರೈನ್ ಹುಡ್ ಪರ ವಕೀಲರು ಚಾಟ್‌ಜಿಪಿಟಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಚಾಟ್‌ಜಿಪಿಟಿಯು ಐಟಿ ಕ್ಷೇತ್ರಕ್ಕೆ ಎಷ್ಟು ಅನುಕೂಲಕಾರಿಯಾಗಿದೆಯೋ, ಅಷ್ಟೇ ಅಪಾಯಕಾರಿಯೂ ಆಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಬೆಲ್ಜಿಯಂನಲ್ಲಿ ಕೆಲ ದಿನಗಳ ಹಿಂದೆ ಚಾಟ್‌ಜಿಪಿಟಿಗೆ ಅಡಿಕ್ಟ್ ಆದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಭಾರಿ ಸುದ್ದಿಯಾಗಿತ್ತು.
ಚೈ ಎಂಬ App ಡೌನ್‌ಲೋಡ್ ಮಾಡಿಕೊಂಡ ನನ್ನ ಪತಿಯು ಆರು ವಾರಗಳಿಂದ ಅದನ್ನೇ ಬಳಸುತ್ತಿದ್ದರು. ಜಾಗತಿಕ ಹವಾಮಾನ ಬದಲಾವಣೆ, ಅದರಿಂದಾಗುವ ಪರಿಣಾಮ, ಮನುಕುಲಕ್ಕೆ ಎದುರಾಗುವ ಸಮಸ್ಯೆ ಕುರಿತು ಅವರಿಗೆ ಭೀತಿಯಾಗಿದೆ. ಇದೇ ಭಯದಿಂದ ಅವರು ಮಾನಸಿಕವಾಗಿ ಕುಗ್ಗಿ, ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆತನ ಪತ್ನಿ ಆರೋಪಿಸಿದ್ದರು. ಅವರು ಆರು ವಾರದಿಂದ ನಿರಂತರವಾಗಿ ಚೈ ಚಾಟ್‌ಬಾಟ್‌ಅನ್ನು ಬಳಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಆದಾಗ್ಯೂ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪಿರೆ ಎಂಬುದಾಗಿ ಹಾಗೂ ಆತನ ಪತ್ನಿಯ ಹೆಸರು ಕ್ಲೈರ್ ಎಂಬುದಾಗಿ ತಿಳಿದುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ChatGpt Jobs: ಚಾಟ್‌ಜಿಪಿಟಿಯಿಂದ ಭಾರಿ ಉದ್ಯೋಗ ಸೃಷ್ಟಿ, ಇವರಿಗೆ ಸಿಗಲಿದೆ 2.75 ಕೋಟಿ ರೂ. ಸಂಬಳ