Site icon Vistara News

Flying Taxi: ಜಗತ್ತಿನ ಮೊದಲ ‘ಹಾರುವ ಟ್ಯಾಕ್ಸಿ’ಗೆ ಚೀನಾ ಅಸ್ತು; ಇದರ ಹಾರಾಟ ಹೇಗಿದೆ ನೋಡಿ!

Flying Taxi

China approves world’s first passenger-carrying flying taxi

ಬೀಜಿಂಗ್:‌ ಟ್ಯಾಕ್ಸಿ ಎಂದರೆ ನಮಗೆ ಕಾರು ಅಥವಾ ಕ್ಯಾಬ್‌ಗಳಷ್ಟೇ ಗೊತ್ತು. ಓಲಾ ಅಥವಾ ಉಬರ್‌ನಲ್ಲಿ ಬುಕ್‌ ಮಾಡಿಕೊಂಡು ಸುತ್ತಾಡಿದ್ದಷ್ಟೇ ಗೊತ್ತು. ಆದರೆ, ಟ್ಯಾಕ್ಸಿ ಎಂದರೆ ಹಕ್ಕಿಯಂತೆ ಹಾರುವ, ಟ್ರಾಫಿಕ್‌ ಕಿರಿಕಿರಿ ಇಲ್ಲದೆ, ನಿಗದಿತ ಸಮಯಕ್ಕೆ, ನಿಗದಿತ ಸ್ಥಳಕ್ಕೆ ತೆರಳುವ ಟ್ಯಾಕ್ಸಿಯೊಂದು ಹಾರಲು ಸಜ್ಜಾಗಿದೆ. ಹೌದು, ಜಗತ್ತಿನಲ್ಲೇ ಮೊದಲ ಬಾರಿಗೆ ಚೀನಾದಲ್ಲಿ ಹಾರುವ ಟ್ಯಾಕ್ಸಿಗೆ ಸರ್ಕಾರ (Flying Taxi) ಅನುಮತಿ ನೀಡಿದೆ.

ಹೌದು, ಗುವಾಂಗ್‌ಜೌ ಮೂಲದ ಎಹಾಂಗ್‌ (Ehang) ಎಂಕ ಕಂಪನಿಯ ಹಾರುವ ಟ್ಯಾಕ್ಸಿಗೆ ಚೀನಾ ನಾಗರಿಕ ವಿಮಾನಯಾನ ಆಡಳಿತವು (CAAC) ‘ಟೈಪ್‌ ಸರ್ಟಿಫಿಕೇಟ್’‌ ನೀಡಿದೆ. ಅಂದರೆ, ಶೀಘ್ರದಲ್ಲಿಯೇ ಇಎಚ್‌216-ಎಸ್‌ ಎಎವಿ ಎಂಬ ಫ್ಲೈಯಿಂಗ್‌ ಟ್ಯಾಕ್ಸಿಯು ಗುವಾಂಗ್‌ಜೌ ನಗರದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹಾರಾಟ ನಡೆಸಲಿದೆ ಎಂದು ತಿಳಿದುಬಂದಿದೆ.

ಹೀಗೆ ಹಾರುತ್ತದೆ ನೋಡಿ ಟ್ಯಾಕ್ಸಿ

ಇದರೊಂದಿಗೆ ಎಹಾಂಗ್‌ ಕಂಪನಿಯ ಇಎಚ್‌216-ಎಸ್‌ ಎಎವಿ ಟ್ಯಾಕ್ಸಿಯು ಜಗತ್ತಿನ ಮೊದಲ ಎಲೆಕ್ಟ್ರಿಕ್‌ ವರ್ಟಿಕಲ್‌ ಟೇಕ್‌-ಆಫ್‌ ಹಾಗೂ ಲ್ಯಾಂಡಿಗ್‌ ಟ್ಯಾಕ್ಸಿ (eVTOL) ಎನಿಸಿದೆ. ಎರಡು ಸೀಟರ್‌ನ ಹಾರುವ ಟ್ಯಾಕ್ಸಿ ಇದಾಗಿದ್ದು, ಪೈಲಟ್‌ ಇಲ್ಲದೆಯೇ ಹಾರಾಟ ನಡೆಸಲು ಕೂಡ ಅನುಮತಿ ನೀಡಲಾಗಿದೆ. ಆರಂಭಿಕ ಹಂತದಲ್ಲಿ ಇದು ಚೀನಾದಲ್ಲಿ ಮಾತ್ರ ‘ಫ್ಲೈಯಿಂಗ್‌ ಟ್ಯಾಕ್ಸಿ’ ಸೇವೆ ಒದಗಿಸಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಮೊದಲು ಗುವಾಂಗ್‌ಜೌನಲ್ಲಿ ಮಾತ್ರ ಹಾರಾಟ ನಡೆಸಲಿರುವ ಫ್ಲೈಯಿಂಗ್‌ ಟ್ಯಾಕ್ಸಿಯು, ನಂತರ ಎಲ್ಲ ನಗರಗಳಿಗೆ ವಿಸ್ತರಣೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Goodbye MiG 21: ‘ಹಾರುವ ಶವಪೆಟ್ಟಿಗೆ’ ಮಿಗ್‌ 21 ಯುದ್ಧ ವಿಮಾನಗಳು ಇನ್ನು ನೆನಪಷ್ಟೆ!

ಎಹಾಂಗ್‌ ಕಂಪನಿ ಸಿಇಒ ಹುವಾಜಿ ಹು ಅವರು ಸಿಎನ್‌ಬಿಸಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು, “ಜಗತ್ತಿನ ಮೊದಲ ಹಾರುವ ಟ್ಯಾಕ್ಸಿಗೆ ಅನುಮತಿ ದೊರೆತಿರುವುದು ಖುಷಿ ತಂದಿದೆ. ಇದು ಅಮೆರಿಕ, ಯುರೋಪ್‌, ಸೌತ್‌ಈಸ್ಟ್‌ ಏಷ್ಯಾದಲ್ಲೂ ಇಂತಹ ಪ್ರಮಾಣಪತ್ರಗಳನ್ನು ನೀಡಲು ನಾಂದಿ ಹಾಡಲಿದೆ” ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಈಗ ಪೈಲಟ್‌ ಇರುವ ಫ್ಲೈಯಿಂಗ್‌ ಟ್ಯಾಕ್ಸಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

Exit mobile version